

ಲಂಡನ್: ಕೆಎಫ್ಸಿ ಚಿಕನ್ ಅಂದ್ರೆ ಬಹುತೇಕರಿಗೆ ಬಲುಪ್ರಿಯ. ಏಕೆಂದರೆ, ಬಹಳ ರುಚಿ ಹಾಗೂ ಗರಿಗರಿಯಾಗಿರುತ್ತದೆ. ಹಾಗಂತ ಹಿಂದು-ಮುಂದು ನೋಡದೆ ಕೆಎಫ್ಸಿ ಚಿಕನ್ ಬಾಯಿಗಿಳಿಸಿಕೊಂಡರೆ ಕೆಲವೊಮ್ಮೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಂತಿದೆ.
ಇಂಗ್ಲೆಂಡ್ನ ವಿರ್ರಲ್ ಮೆಟ್ರೋಪಾಲಿಟನ್ನ ಬ್ರೊಂಬರೊ ಪಟ್ಟಣದ ಬ್ರೈನ್ ಡಿ ಆರ್ಕಿ ಮತ್ತವರ ಕುಟುಂಬ ಕೆಎಫ್ಸಿ ಚಿಕಿನ್ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿತ್ತು. ಆರ್ಡರ್ ಮಾಡಿದಂತೆ ಕೆಎಫ್ಸಿ ಚಿಕನ್ ಸರ್ವ್ ಮಾಡಿದ್ದಾರೆ. ಹಿಂದು-ಮುಂದು ನೋಡದೆ ಪ್ಲೇಟ್ನಲ್ಲಿದ್ದ ಚಿಕನ್ ತೆಗೆದು ಬಾಯಿಗೆ ಹಾಕಿದ ಕುಟುಂಬ ತಕ್ಷಣ ಚಿಕನ್ ಪೀಸ್ ಅನ್ನು ಬಾಯಿಯಿಂದ ಉಗಿದಿದ್ದಾರೆ.
ಹಾಗೇ ಉಗಿಯಲು ಕಾರಣ ಚಿಕನ್ ಸ್ಪಲ್ಪವೂ ಬೆಂದಿರಲಿಲ್ಲ. ಬೇಯುವುದಿರಲಿ ಅದು ಕಚ್ಛಾ ಮಾಂಸವಾಗಿತ್ತು ಮತ್ತು ರಕ್ತಸಿಕ್ತ ರುಚಿ ಬರುತ್ತಿತ್ತು ಎಂಬುದು ಕುಟುಂಬದ ಆರೋಪವಾಗಿದೆ. ತಕ್ಷಣ ಹೋಟೆಲ್ ಮ್ಯಾನೇಜರ್ ಜತೆ ವಾಗ್ವಾದಕ್ಕಿಳಿದ ಕುಟುಂಬ ಇನ್ಯಾರಿಗೂ ಈ ರೀತಿಯ ಆಹಾರವನ್ನು ಸರ್ವ್ ಮಾಡಬೇಡಿ ಎಂದು ಬುದ್ಧಿವಾದ ಹೇಳಿದೆ.
ಚಿಕನ್ ಜತೆ ಇನ್ನಿತರ ತಿನ್ನುವ ಪದಾರ್ಥವನ್ನು ಕುಟುಂಬ ಕೊಂಡುಕೊಂಡದ್ದರಂತೆ. ಆದರೆ, ಹಸಿಮಾಂಸ ಮತ್ತು ರಕ್ತಸಿಕ್ತ ರುಚಿ ಬಂದಿದ್ದರಿಂದ ಇತರೆ ಆಹಾರವನ್ನು ತಿನ್ನಲು ಮನಸ್ಸಾಗಲಿಲ್ಲ ಎನ್ನುತ್ತಾರೆ ಬ್ರೈನ್ ಡಿ ಆರ್ಕಿ.
ಮ್ಯಾನೇಜರ್ ಮಾತನಾಡಿ ನಾವು ಸರಿಯಾಗಿ ಬೇಯಿಸಿದ್ದೇವೆ. ಕೆಲವೊಮ್ಮೆ ತಾಜಾ ಮಾಂಸ ಬೇಯಿಸಿದಾಗಲೂ ಅದೇ ಬಣ್ಣವನ್ನೇ ತೋರುತ್ತದೆ ಎಂದು ಹೇಳಿದ್ದಾರೆ. ಕುಟುಂಬಕ್ಕೆ ಹಣವನ್ನು ವಾಪಸ್ಸು ನೀಡಿರುವ ಕೆಎಫ್ಸಿ ಕೇಂದ್ರ, ಆರ್ಕಿ ಕುಟುಂಬಕ್ಕೆ ಕ್ಷಮೆಯನ್ನು ಕೋರಿದೆ. ಇನ್ನೆಂದು ಹೀಗಾಗದ ರೀತಿ ನೋಡಿಕೊಳ್ಳುವ ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಏನೇ ಆಗಲಿ ಮಾಂಸ ತಿನ್ನುವಾಗ ಒಮ್ಮೆ ಪರೀಕ್ಷಿಸಿಕೊಳ್ಳುವುದು ಉತ್ತಮ ಎಂಬುದು ಅನೇಕರ ಅಭಿಪ್ರಾಯವಾಗಿದೆ. (ಏಜೆನ್ಸೀಸ್)