ವಿಶ್ವದ ಏಕಾಂಗಿ ಆನೆಗೆ ಸಿಕ್ಕಿದ್ರು ಮೂವರು ಗೆಳತಿಯರು: ಕಾವನ್​ ವರ್ತನೆ ಕಂಡು ಹುಬ್ಬೇರಿಸಿದ ಪರಿಪಾಲಕ!

Published on

ಫೆನೋಮ್ ಪೆನ್: ವಿಶ್ವದ ಏಕಾಂಗಿ ಆನೆಯೆಂದೇ ಪ್ರಸಿದ್ಧಿಯಾಗಿರುವ "ಕಾವನ್​" ಆನೆಗೆ ಇದೀಗ ಮೂವರು ಗೆಳತಿಯರು ಸಿಕ್ಕಿದ್ದಾರೆ. ಕುತೂಹಲಕಾರಿ ವಿಚಾರವೆಂದರೆ ಮೂರು ಹೆಣ್ಣಾನೆಗಳಲ್ಲಿ ಒಂದರ ಮೇಲೆ ಕಾವನ್​ ಹೆಚ್ಚು ಆಸಕ್ತಿ ತೋರುತ್ತಿದ್ದಾನೆಂದು ಆತನ ಪರಿಪಾಲಕ ತಿಳಿಸಿದ್ದು, ಕಾವನ್​ಗೆ ಪ್ರೇಮಾಂಕುರವಾಗಿದೆ ಎಂದು ಅರ್ಥೈಸಲಾಗಿದೆ.

ಅಂದಹಾಗೆ 35 ವರ್ಷದ ಏಷ್ಯಾ ಆನೆ ಕಾವನ್ ಕಳೆದ ತಿಂಗಳವರೆಗೂ ಪಾಕಿಸ್ತಾನದ ಇಸ್ಲಮಾಬಾದ್​ ಮೃಗಾಲಯದಲ್ಲಿ ಒಬ್ಬಂಟಿಯಾಗಿ ಶೋಕಿಸುತ್ತಿದ್ದ. ಕಾವನ್​ ಸಂಗಾತಿ ಆನೆ 2012ರಲ್ಲಿ ಇಸ್ಲಮಾಬಾದ್​ನ ಮಾರ್ಘಜರ್​ ಮೃಗಾಲಯದಲ್ಲಿ ಕಾಯಿಲೆಯಿಂದ ಮೃತಪಟ್ಟಾಗಿನಿಂದ ಕಾವನ್​ ಒಂಟಿಯಾಗಿ ದಿನ ದೂಡುತ್ತಿತ್ತು.

ಆನೆಯ ಮೂಕರೋಧನೆ ನೋಡಿದ ಪ್ರಾಣಿ ಪ್ರಿಯರು ಸಾಕಷ್ಟು ಅಭಿಯಾನ ನಡೆಸಿದ್ದರು. ಯಾರೇ ಆಗಲಿ ಜೀವನದಲ್ಲಿ ಒಬ್ಬಂಟಿಯಾಗಿ ಬದುಕುವುದು ಕಷ್ಟ. ಒಬ್ಬರಿಗೊಬ್ಬರ ಆಶ್ರಯ ಬೇಕೇ ಬೇಕು. ಹೀಗಾಗಿ ಒಂಟಿಯಾಗಿ ಕಾವನ್​ ಪರ ಪ್ರಾಣಿ ಪ್ರಿಯರು ಧ್ವನಿಯೆತ್ತಿದ್ದರ ಪರಿಣಾಮ 2020, ನವೆಂಬರ್​ 30ರಂದು ಕಾಂಬೋಡಿಯಾ ಸರ್ಕಾರ ತನ್ನ ದೇಶಕ್ಕೆ ಕಾವನ್​ನನ್ನು ಕರೆಸಿಕೊಂಡಿತು. ಸದ್ಯ ಕಾವನ್​ ಕಾಂಬೋಡಿಯಾದ ಕುಲೆನ್​ ಫ್ರುಮ್​ ಟೆಪ್​ ವನ್ಯಜೀನ ಅಭಯಾರಣ್ಯದಲ್ಲಿ ಮೂವರು ಗೆಳತಿಯರೊಂದಿಗೆ ಸಂತಸದ ಕ್ಷಣ ಆನಂದಿಸುತ್ತಿದ್ದಾನೆ.

ಸಾಕಷ್ಟು ದಿನಗಳಿಂದ ಒಬ್ಬಂಟಿಯಾಗಿದ್ದ ಕಾವನ್​, ನಿಧಾನವಾಗಿ ಇನ್ನಿತರ ಆನೆಗಳೊಂದಿಗೆ ಬೆರೆಯುತ್ತಿದ್ದಾನೆ. ಕಾವನ್​ ಸಂಪೂರ್ಣವಾಗಿ ಆನೆಗಳೊಂದಿಗೆ ಒಗ್ಗಿಕೊಂಡರೆ ಇನ್ನು ಕೆಲವೇ ತಿಂಗಳಲ್ಲಿ ಮೂರು ಹೆಣ್ಣಾನೆಗಳೊಂದಿಗೆ ಅಭಯಾರಣ್ಯದಲ್ಲಿ ಮುಕ್ತವಾಗಿ ಓಡಾಡಿಕೊಂಡು ಇರಲು ಬಿಡಲಾಗುತ್ತದೆ.

ಮೂವರು ಆನೆಗಳೊಂದಿಗೆ ಕಾವನ್​ ಹೊಂದಿಕೊಂಡಿದ್ದಾನೆ. ಆದರೆ, ಒಂದು ಆನೆಯ ಮೇಲೆ ಹೆಚ್ಚು ಆಸಕ್ತಿ ತೋರುತ್ತಿರುವುದು ಪರಿಪಾಲಕನ ಗಮನಕ್ಕೆ ಬಂದಿದೆ ಎಂದು ಕಾಂಬೋಡಿಯಾ ವನ್ಯಜೀವಿ ಅಭಯಾರಣ್ಯದ ಅಧ್ಯಕ್ಷ ಹಾಗೂ ಕಾವನ್​ ಪರಿಪಾಲ​ಕ ಸಾಕ್​ ಹಾಂಗ್​ ಹೇಳಿದ್ದಾರೆ.

ಕಾವನ್​ ಮೇಲೆ ಸಾಕಷ್ಟು ಗಮನ ಇರಿಸಲಾಗಿದ್ದು, ಅದರ ಚಲನಾವಲನವನ್ನು ಪ್ರತಿ ಕ್ಷಣ ಗಮನಿಸುತ್ತಾ, ಇತರೆ ಜೀವಿಗಳಂತೆ ಆರಾಮಾಗಿ ಓಡಾಡಿಕೊಂಡು ಇರುವಂತೆ ತಯಾರಿ ಮಾಡಲಾಗುತ್ತಿದೆ. ಪಾಕಿಸ್ತಾನದ ಮೃಗಾಲಯದಲ್ಲಿ ಒಬ್ಬಂಟಿಯಾಗಿದ್ದ ಕಾವನ್​ ಮನಸ್ಸಿಗೆ ತುಂಬಾ ಘಾಸಿಯಾಗಿತ್ತು. ಸಂಗಾತಿಯಿಲ್ಲದೆ ಜೀವನದಲ್ಲಿ ತುಂಬಾ ರೋಧಿಸಿತ್ತು. ಈಗಲೂ ಸಹ ಕಾವನ್​ ತನ್ನ ಹಳೆಯ ಸಂಗಾತಿಯನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾನೆಂದು ಸಾಕ್​ ಹಾಂಗ್​ ತಿಳಿಸಿದ್ದಾರೆ.

ಅಲ್ಲದೆ, ಕಾವನ್​ ಎಲ್ಲರಂತಾಗಿ, ಎಲ್ಲರೊಂದಿಗೆ ಬೆರೆತು ಮುಂದೆ ಕಾಂಬೋಡಿಯಾಗೆ ಅನೇಕ ಆನೆ ಮರಿಗಳನ್ನು ಕೊಡುಗೆಯಾಗಿ ನೀಡುತ್ತಾನೆಂಬ ಭರವಸೆ ಇದೆ ಎಂದು ಸಾಕ್​ ಹಾಂಗ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net