

ಬೆಂಗಳೂರು: ನೂರಾರು ಕುಟುಂಬಗಳನ್ನು ಮನೆಯೊಳಗೆ ಒಗ್ಗೂಡಿಸಿರುವ ಲಾಕ್ಡೌನ್ನಿಂದ ದಾಂಪತ್ಯ ಕಲಹ ಕೂಡ ಹೆಚ್ಚಾಗಿದೆ! ಕೌಟುಂಬಿಕ ಸಮಸ್ಯೆ ಬಗೆಹರಿಸುವಲ್ಲಿ ಸಕ್ರಿಯವಾಗಿರುವ ವನಿತಾ ಸಹಾಯವಾಣಿ ಕೇಂದ್ರಕ್ಕೆ ಬರುವ ಕರೆಗಳ ಸಂಖ್ಯೆ ಕೆಲವು ದಿನಗಳಿಂದ ಹೆಚ್ಚಳವಾಗಿದ್ದು, ಬಹುತೇಕ ಪ್ರಕರಣಗಳು ಕೌಟುಂಬಿಕ ದೌರ್ಜನ್ಯಕ್ಕೆ ಸೀಮಿತವಾಗಿವೆ. ಲಾಕ್ಡೌನ್ ಮುನ್ನ ಸಲಹಾ ಕೇಂದ್ರಕ್ಕೆ ಪ್ರತಿನಿತ್ಯ 5 ರಿಂದ 10 ಪ್ರಕರಣ ಬರುತ್ತಿತ್ತು. ಇದೀಗ ಕನಿಷ್ಠ 26 ರಿಂದ 30 ದೂರು ಬರುತ್ತಿವೆ. ಶೇ.70 ಪ್ರಕರಣ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕರೆಗಳಾಗಿವೆ. ಉಳಿದ ಕೇಸ್ಗಳು ಪಾಸ್ ಕೊಡಿಸಿ, ಊಟ ತಂದು ಕೊಡಿ, ಮನೆಗೆ ಹೋಗಲು ವ್ಯವಸ್ಥೆ ಮಾಡಿ ಎಂಬುದಕ್ಕೆ ಸೀಮಿತವಾಗಿವೆ.
ಹಳೇ ಚಾಳಿ ಶುರು: ವಿವಾಹಿತ ಮಹಿಳೆಯೊಬ್ಬರು ಈ ಹಿಂದೆ ಪತಿಯ ದೈಹಿಕ ಕಿರುಕುಳದಿಂದ ಬೇಸತ್ತು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಎಚ್ಚರಿಕೆ ನೀಡಿದ್ದರಿಂದ ಕಿರುಕುಳ ನಿಲ್ಲಿಸಿದ್ದ ಪತಿರಾಯ ಲಾಕ್ಡೌನ್ ಸಂದರ್ಭದಲ್ಲಿ ಹಳೇ ಚಾಳಿ ಮುಂದುವರಿಸಿದ್ದಾನೆ. ಆತನ ಕಿರುಕುಳ ತಾಳಲಾರದೆ ಮಹಿಳೆ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ಸ್ಥಳೀಯ ಠಾಣೆಗೆ ಮಾಹಿತಿ ಕೊಟ್ಟು ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ.
ಕೇಸ್ ನಂ.3: ಮನೆಯಿಂದಲೇ ಕೆಲಸ ಮಾಡುತ್ತಿರುವ ಪ್ರತಿಷ್ಠಿತ ಸಂಸ್ಥೆಯ ಸಾಫ್ಟ್ವೇರ್ ಇಂಜಿನಿಯರ್ ಇತ್ತೀಚೆಗೆ ಪತ್ನಿಗೆ ದೈಹಿಕ ಹಿಂಸೆ ನೀಡುತ್ತಿದ್ದ. ಲಾಕ್ಡೌನ್ ಹಿನ್ನೆಲೆಯಲ್ಲಿ ತವರು ಮನೆಗೂ ಹೋಗಲಾಗದೆ ಆಕೆ ಹಿಂಸೆ ಸಹಿಸಿಕೊಂಡಿದ್ದಾರೆ. ದಯವಿಟ್ಟು ಸಹಾಯ ಮಾಡಿ ಎಂದು ಸಹಾಯವಾಣಿಗೆ ಕರೆ ಮಾಡಿದ್ದಾರೆ. ಆಪ್ತ ಸಮಾಲೋಚಕರು ಸ್ಥಳೀಯ ಪೊಲೀಸರ ಮೊಬೈಲ್ ನಂಬರ್ ನೀಡಿ, ದೂರು ನೀಡುವಂತೆ ಸೂಚಿಸಿದ್ದಾರೆ.
ಕೇಸ್ ನಂ.4: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪತಿ ನನ್ನೊಂದಿಗೆ ಅನ್ಯೋನ್ಯವಾಗಿದ್ದರು. ಲಾಕ್ಡೌನ್ ಬಳಿಕ ಕಳೆದ ಒಂದು ವಾರದಿಂದ ಸುಮ್ಮನೆ ಜಗಳ ಮಾಡುತ್ತಾ ದೈಹಿಕವಾಗಿ ಹಿಂಸಿಸುತ್ತಿದ್ದಾರೆ. ದಯವಿಟ್ಟು ಪತಿಗೆ ಬುದ್ದಿಮಾತು ಹೇಳಿ ಎಂದು ಪತ್ನಿ ಮನವಿ ಮಾಡಿಕೊಂಡಿದ್ದಳು. ಸಹಾಯವಾಣಿ ಸಿಬ್ಬಂದಿ ಪತಿಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಕೇಸ್ ನಂ.5: ಲಾಕ್ಡೌನ್ ಬಳಿಕ ಬಾಡಿಗೆದಾರರು ಮನೆಯ ಬಾಡಿಗೆ ನೀಡಿಲ್ಲ ಎಂದು ಬೆಂಗಳೂರಿನ ವ್ಯಕ್ತಿಯೊಬ್ಬರು ಸಹಾಯವಾಣಿ ಮೊರೆ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಾಡಿಗೆ ಕೇಳುವುದು ಸರಿಯಲ್ಲ ಎಂದು ಆಪ್ತ ಸಮಾಲೋಚಕರು ಬುದ್ಧಿಮಾತು ಹೇಳಿದ್ದಾರೆ
ನಮ್ಮ 100ಕ್ಕೂ ಬರ್ತವೆ: ‘ನಮ್ಮ 100’ ಸಹಾಯವಾಣಿಗೂ ಪ್ರತಿದಿನ ಸರಾಸರಿ 50 ರಿಂದ 60 ಕರೆಗಳು ಬರುತ್ತಿವೆ. ಇದರಲ್ಲಿ ಅಂಗಡಿ ಮುಂದೆ ಜನಜಂಗುಳಿ ಇದೆ. ಕ್ವಾರೆಂಟೈನ್ನಲ್ಲಿರುವವರು ಹೊರ ಬರುವುದು, ಕೌಟುಂಬಿಕ ಸಮಸ್ಯೆಗಳಂತಹ ಕರೆಗಳೇ ಹೆಚ್ಚಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
6 ತಿಂಗಳ ಗರ್ಭಿಣಿ ಅಳಲು: ಖಾಸಗಿ ಕಂಪನಿಯ 39 ವರ್ಷದ ಮಹಿಳಾ ಉದ್ಯೋಗಿ ಕೆಲ ವರ್ಷದ ಹಿಂದೆ ಅನ್ಯ ಧರ್ಮದ ಯುವಕನನ್ನು ವಿವಾಹವಾಗಿದ್ದರು. ಸದ್ಯ ಆಕೆ 6 ತಿಂಗಳ ಗರ್ಭಿಣಿ. ಲಾಕ್ಡೌನ್ನಿಂದಾಗಿ ಪತಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾನೆ. ಪ್ರತಿದಿನ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದು, ಮನೆಯಿಂದ ಹೊರಹೋಗಲೂ ಆಗದೇ ಒದ್ದಾಡುತ್ತಿದ್ದೇನೆ. ಹೇಗಾದರು ಮಾಡಿ ನನ್ನನ್ನು ಕಾಪಾಡಿ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ಕರೆ ಮಾಡುವ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಕೌಟುಂಬಿಕ ದೌರ್ಜನ್ಯ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. | ರಾಣಿ ಶೆಟ್ಟಿ ಪರಿಹಾರ್ ಕೌಟುಂಬಿಕ ಸಲಹಾ ಕೇಂದ್ರದ ಉಸ್ತುವಾರಿ