

ಬೆಂಗಳೂರು: ಪತ್ನಿಗೆ ಮಚ್ಚಿನಿಂದ ಹಲ್ಲೆ ಮಾಡುವಾಗ ತಡೆಯಲು ಮುಂದಾದ ಪತಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಂಗೊಂಡನಹಳ್ಳಿ ನಿವಾಸಿ ಮುದಾಸೀರ್ ಖಾನ್(೩೫) ಕುಸಿದು ಬಿದ್ದು ಮೃತಪಟ್ಟವರು. ಆತನ ಪತ್ನಿ ಆಯೇಷಾ ಬಾನುಗೆ ಮಚ್ಚಿನಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪದಡಿ ವಹೀದ್ ಅಹಮ್ಮದ್ ಮತ್ತು ಮತೀನ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಮುದಾಸೀರ್ ಖಾನ್‌ಗೆ ಆರೋಪಿಗಳು ಅಕ್ಕನ ಮಕ್ಕಳು. ವಹೀದ್ ಕೆಲ ದಿನಗಳಿಂದ ಮುದಾಸೀರ್ ಖಾನ್ ಪತ್ನಿ ಆಯೇಷಾ ಬಾನು ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ. ಎಲ್ಲರ ಎದುರಿಗೆ ಚುಡಾಯಿಸುವುದು, ರೇಗಿಸಿ ಮುಜುಗರ ಉಂಟು ಮಾಡುತ್ತಿದ್ದ. ಈ ವಿಚಾರವನ್ನು ಆಯೇಷಾ ಬಾನು ಪತಿ ಮುದಾಸೀರ್‌ಗೆ ಹೇಳಿದ್ದಳು. ಹೀಗಾಗಿ ಗುರುವಾರ ರಾತ್ರಿ ೯ ಗಂಟೆ ಸುಮಾರಿಗೆ ಮುದಾಸೀರ್ ಮತ್ತು ಆಯೇಷಾ ಬಾನು, ವಹೀದ್ ಮನೆ ಬಳಿ ತೆರಳಿದ್ದರು. ಈ ವೇಳೆ ವಹೀದ್ ವರ್ತನೆ ಬಗ್ಗೆ ಮುದಾಸೀರ್, ಮತಿನ್‌ಗೆ ಹೇಳಲು ಮುಂದಾಗಿದ್ದಾನೆ. ಈ ವೇಳೆ ರೊಚ್ಚಿಗೆದ್ದ ವಹೀದ್, ದ್ವಿಚಕ್ರ ವಾಹನದಲ್ಲಿ ಇರಿಸಿಕೊಂಡಿದ್ದ ಮಚ್ಚು ತೆಗೆದುಕೊಂಡು ಏಕಾಏಕಿ ಆಯೇಷಾ ಬಾನು ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದಾನೆ. ತನ್ನೆದುರೇ ಪತ್ನಿಗೆ ಮಚ್ಚಿನಿಂದ ಹಲ್ಲೆ ಮಾಡುತ್ತಿರುವುದನ್ನು ತಡೆಯಲು ಮುದಾಸೀರ್ ಮುಂದಾಗಿದ್ದು, ಈ ವೇಳೆ ವಹೀದ್ ಕೈಯಲ್ಲಿದ್ದ ಮಚ್ಚು ನೆಲಕ್ಕೆ ಬಿದ್ದಿದೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ವಹೀದ್, ಮುದಾಸೀರ್ ಮೇಲೆ ಎರಗಿ ಕೈಗಳಿಂದ ಹಲ್ಲೆ ಮಾಡಿದ್ದಾನೆ. ಅಷ್ಟರಲ್ಲಿ ಸ್ಥಳೀಯರು ಧಾವಿಸಿ ಜಗಳ ಬಿಡಿಸಿದ್ದಾರೆ. ಅಷ್ಟರಲ್ಲಿ ಮುದಾಸೀರ್ ಕುಸಿದು ಬಿದ್ದು ರಸ್ತೆಯಲ್ಲೇ ಮೃತಪಟ್ಟಿದ್ದಾರೆ.
ಆಯೇಷಾ ಬಾನುಗೆ ಗಾಯ:
ವಹೀದ್ ಮಚ್ಚಿನಿಂದ ಹಲ್ಲೆ ಮಾಡಿದ ಪರಿಣಾಮ ಆಯೇಷಾ ಬಾನು ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ. ಆಕೆ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಕೆ ನೀಡಿದ ದೂರಿನ ಮೇರೆಗೆ ಕೊಲೆ ಮತ್ತು ಕೊಲೆಗೆ ಯತ್ನ ಪ್ರಕರಣ ದಾಖಲಿಸಿ ಆರೋಪಿಗಳಾದ ವಹೀದ್ ಮತ್ತು ಮತೀನ್‌ನನ್ನು ಬಂಧಿಸಲಾಗಿದೆ. ಜಗಳದ ವೇಳೆ ಆರೋಪಿಗಳು ಮುದಾಸೀರ್ ಮೇಲೆ ಕೈಗಳಿಂದ ಹಲ್ಲೆ ಮಾಡಿದ್ದಾರೆ. ಮುದಾಸೀರ್‌ಗೆ ಸಾವಿಗೆ ಸದ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಹಲ್ಲೆ ವೇಳೆ ಎದೆ ಭಾಗಕ್ಕೆ ಬಲವಾದ ಏಟು ಬಿದ್ದು ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ನಿಖರ ಕಾರಣ ತಿಳಿದು ಬರಲಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.