ನಮ್ಮ ಸಂಸಾರ ಆನಂದ ಸಾಗರ : ಕೌಟುಂಬಿಕ ಮೌಲ್ಯಗಳನ್ನು ಎತ್ತಿಹಿಡಿದ ಸ್ಯಾಂಡಲ್‌ವುಡ್ ತಾರೆಯರು

ವಿನಯ ರಾಜಕುಮಾರ್ ಕುಟುಂಬ
ವಿನಯ ರಾಜಕುಮಾರ್ ಕುಟುಂಬ
Published on

ಪ್ರಮುಖ ಮುಖ್ಯಾಂಶಗಳು

  • ಇಂದು (ಮೇ 15) ಅಂತಾರಾಷ್ಟ್ರೀಯ ಕುಟುಂಬ ದಿನಾಚರಣೆ
  • ಕುಟುಂಬದ ಜತೆಗಿನ ಒಡನಾಟ ನೆನಪಿಸಿದ ತಾರೆಯರು
  • ಒತ್ತಡದ ಮಧ್ಯೆಯೂ ಕುಟುಂಬದ ಜತೆ ಕಾಲ ಕಳೆಯಲು ಇಷ್ಟಪಡುವ ಕಲಾವಿದರು

ಮನೆಯೆ ಮೊದಲ ಪಾಠಶಾಲೆ ಎಂಬ ಗಾದೆಯಿದೆ. ಅದರಂತೆ ಮನೆಯಲ್ಲಿ ನಾವು ಏನು ಕಲಿಯುತ್ತೇವೋ ಅದು ಸಮಾಜದಲ್ಲಿ ಪ್ರತಿಲವಾಗುತ್ತದೆ. ಅದಕ್ಕಾಗಿ ಕುಟುಂಬದ ಜವಾಬ್ದಾರಿ ದೊಡ್ಡದು. ಇಂದು ವಿಶ್ವ ಕುಟುಂಬ ದಿನ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ತಾರೆಯರಾದ ವಿನಯ್ ರಾಜಕುಮಾರ್, ಅದ್ವಿತಿ ಶೆಟ್ಟಿ, ರೇಷ್ಮಾ ಲಿಂಗರಾಜಪ್ಪ ಕುಟುಂಬದ ಮೌಲ್ಯದ ಕುರಿತು ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ.

ಫ್ಯಾಮಿಲಿನೇ ಫ್ರೆಂಡ್ಸ್, ಫ್ರೆಂಡ್ಸೇ ಫ್ಯಾಮಿಲಿ!

ನನಗೆ ನನ್ನ ಕುಟುಂಬವೇ ಎಲ್ಲಕ್ಕಿಂತ ಮಿಗಿಲು. ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ನಮ್ಮ ಫ್ಯಾಮಿಲಿಯೇ ನಮ್ಮ ಮೂಲ. ನಾವು ಯಾರು? ಏನು? ಎಂಬುದು ಎಲ್ಲರಿಗೆ ಗೊತ್ತಾಗುವುದೇ ನಮ್ಮ ಹಿನ್ನೆಲೆಯಿಂದ, ಕುಟುಂಬದಿಂದ. ಸಣ್ಣ ವಯಸ್ಸಿನಿಂದಲೂ ಕುಟುಂಬದವರು ಏನು ಹೇಳುತ್ತಾರೋ, ಅದೇ ಸತ್ಯ ಎಂದು ಬದುಕುತ್ತಿರುತ್ತೇವೆ. ಸಣ್ಣ ವಯಸ್ಸಿನಿಂದಲೂ ನಮ್ಮ ಕುಟುಂಬ ನಮ್ಮನ್ನು ರೂಪಿಸುತ್ತದೆ. ಅದು ಒಂದು ರೀತಿಯ ಸೇಫ್​ ಪ್ಲೇಸ್. ಯಾವಾಗಲೂ ರಕ್ಷಿಸುತ್ತದೆ, ಜೊತೆಯಾಗಿರುತ್ತದೆ. ಪ್ರೀತಿಯ ವಿನಿಮಯ ನಡೆಯುತ್ತಿರುತ್ತದೆ. ಸಾಮಾನ್ಯವಾಗಿ ಮಕ್ಕಳು ಬೆಳೆದಂತೆ ಫ್ರೆಂಡ್ಸ್​ಗೆ ಹೆಚ್ಚು ಕ್ಲೋಸ್ ಆಗಿ, ಕುಟುಂಬದೊಂದಿಗೆ ಬೆರೆಯವುದು, ವಿಷಯಗಳನ್ನು ಹಂಚಿಕೊಳ್ಳುವದನ್ನು ಕಡಿಮೆ ಮಾಡುತ್ತಾರೆ. ಆದರೆ, ನನ್ನ ವಿಷಯದಲ್ಲಿ ಹಾಗಿಲ್ಲ. ನಾನು ಅಪ್ಪ, ಅಮ್ಮನ ಬಳಿ ಏನನ್ನೂ ಮುಚ್ಚಿಡುವುದಿಲ್ಲ. ಈಗಲೂ ಎಲ್ಲ ವಿಷಯಗಳನ್ನೂ ಮುಕ್ತವಾಗಿ ಹೇಳಿಕೊಳ್ಳುತ್ತೇನೆ. ಹಾಗೇ ನನ್ನ ಗೆಳೆಯರೆಲ್ಲರೂ ನನಗೆ ಮಾತ್ರವಲ್ಲ, ನನ್ನ ಕುಟುಂಬಕ್ಕೂ ಕ್ಲೋಸ್. ಫ್ಯಾಮಿಲಿನೇ ಫ್ರೆಂಡ್ಸ್, ಫ್ರೆಂಡ್ಸೇ ಫ್ಯಾಮಿಲಿ! ಏಕೆಂದರೆ, ನನ್ನ ಗೆಳೆಯರು ನನಗೆ ಎಷ್ಟು ಆಪ್ತರೋ ನನ್ನ ತಮ್ಮ, ಅಮ್ಮ, ಅಪ್ಪನಿಗೂ ಅಷ್ಟೇ ಆಪ್ತರು.

| ವಿನಯ್ ರಾಜಕುಮಾರ್, ನಟ

ಕೌಟುಂಬಿಕ ಮೌಲ್ಯವನ್ನು ಕಾಪಾಡಿ

ಎಷ್ಟೇ ಕೆಲಸದ ಒತ್ತಡ, ಬಿಜಿ ಇದ್ದರೂ ಕುಟುಂಬಕ್ಕೆ ಸಮಯ ನೀಡುವುದನ್ನು ನಾನು ಮರೆಯುವುದಿಲ್ಲ. ಶೂಟಿಂಗ್ ನಡುವೆ ಬಿಡುವು ಸಿಕ್ಕಿತೆಂದರೆ ಮೊದಲು ಕುಟುಂಬದ ಜತೆ ಸಮಯ ಕಳೆಯಲು ಇಚ್ಛಿಸುತ್ತೇನೆ. ಕೆಲ ವರ್ಷಗಳ ಹಿಂದೆ ಅಪ್ಪ ಆಸ್ಪತ್ರೆ ಸೇರಿದ್ದಾಗ, ನಾನು ಯಾವ ಸಿನಿಮಾ ಒಪ್ಪಿಕೊಳ್ಳದೆ ಐದು ತಿಂಗಳ ಕಾಲ ಅವರ ಕಾಳಜಿ ವಹಿಸಿದ್ದೆ. ಇಂದು ಅವರು ನಮ್ಮೊಂದಿಗಿಲ್ಲ. ಆದರೆ, ಅವರು ಕಲಿಸಿದ ಪಾಠಗಳೇ ನನ್ನ ಬದುಕಿಗೆ ಹಾದಿ. ಇಂದಿನ ಯುವ ಸಮುದಾಯ ಬಿಜಿ ಕೆಲಸದ ಮಧ್ಯೆ, ಕುಟುಂಬಕ್ಕೆ ಪ್ರಾಮುಖ್ಯ ನೀಡುವುದನ್ನು ಮರೆಯುತ್ತಿದೆ. ತಂದೆ-ತಾಯಿ ನಮಗೆ ಜೀವನ ನೀಡಿರುತ್ತಾರೆ. ಐಷಾರಾಮಿ ಜೀವನ ಸಿಕ್ಕಿತೆಂದು ಅವರನ್ನು ಮರೆಯುವುದು ತಪ್ಪು. ದಿನಕ್ಕೆ ಒಮ್ಮೆಯಾದರೂ ಅವರನ್ನು ಮಾತನಾಡಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ನಮ್ಮದು ಐದು ಜನರಿರುವ ಸಣ್ಣ ಕುಟುಂಬ. ಆದರೆ, ಮನೆಯಲ್ಲಿ ಹಬ್ಬ-ಹರಿದಿನಕ್ಕೆ ಇಡೀ ನಮ್ಮ ‘ಬಡಿಲಗುತ್ತು’ ಮನೆತನವೇ ಸೇರುತ್ತದೆ. ಆಗ ಸಿಗುವ ಸಂಭ್ರಮ ನಿಜಕ್ಕೂ ಸ್ಮರಣೀಯ. ಅವಿಭಕ್ತ ಕುಟುಂಬದಿಂದ ಅನ್ಯೋನ್ಯತೆ, ಪ್ರತಿಯೊಬ್ಬರನ್ನು ಗೌರವಿಸುವುದು ಹೇಗೆ ಎನ್ನುವುದನ್ನು ಕಲಿಯುತ್ತೇವೆ. ಕಷ್ಟ-ಸುಖದ ಬಗ್ಗೆ ನಮ್ಮವರಲ್ಲಿ ಹೇಳಿಕೊಂಡಾಗ ಅದೇನೋ ಸಂತೃಪ್ತ ಭಾವ. ಸರಳ, ಗೌರವಯುತ ಜೀವನದ ಮೂಲಕ ಕೌಟುಂಬಿಕ ಮೌಲ್ಯಗಳನ್ನು ಕಾಪಾಡಬೇಕು.

| ಅದ್ವಿತಿ ಶೆಟ್ಟಿ, ನಟಿ

ಸಂಬಂಧಗಳನ್ನು ಗೌರವಿಸಿ

ನಮ್ಮದು ಚಿಕ್ಕ ಕುಟುಂಬ. ಹೀಗಾಗಿ ನನ್ನ ಚಿಕ್ಕಪ್ಪನ ಚಿಕ್ಕಪ್ಪನ ಮಕ್ಕಳು ನಮ್ಮ ಜತೆಯಲ್ಲೇ ಇದ್ದರು. ನಮ್ಮನ್ನು, ಅವರನ್ನು ನೋಡಲು ಆಗಾಗ ಚಿಕ್ಕಪ್ಪ, ಸಂಬಂಧಿಕರು ಮನೆಗೆ ಬರುತ್ತಿದ್ದರು. ಹೆಸರಿಗೆ ಚಿಕ್ಕ ಕುಟುಂಬವಾದರೂ, ಅವರೆಲ್ಲ ಬಂದು ಸೇರುತ್ತಿದ್ದರೆ ನಮ್ಮದು ದೊಡ್ಡ ಸಂಸಾರ ಅನಿಸುತ್ತಿತ್ತು. ಕುಟುಂಬದಲ್ಲಿ ಕೆಲವೇ ಸೀಮಿತ ಜನರು ಬದುಕುವುದಕ್ಕಿಂತ ಹೆಚ್ಚು ಜನ ಇದ್ದರೆ, ನಮ್ಮ ಕಷ್ಟ ಸುಖಗಳನ್ನು ಕೇಳುವವರು ಇರುತ್ತಾರೆ. ಏನಾದರೂ ಮಾರ್ಗದರ್ಶನ ನೀಡುತ್ತಾರೆ. ಆಗ ನಮಗೆ ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಅನುಭವಕ್ಕೆ ಬರುತ್ತದೆ. ಏನೇ ಕಷ್ಟ ಬಂದರೂ ಅದನ್ನು ಧೈರ್ಯದಿಂದ ಎದುರಿಸಬೇಕು ಎನ್ನುವುದನ್ನು ಕುಟುಂಬದಿಂದಲೇ ಕಲಿತಿರುವುದು. ಇಂಜಿನಿಯರಿಂಗ್ ಓದುವಾಗಲೂ ಅಪ್ಪ ಪ್ರತಿದಿನ ನನ್ನನ್ನು ಕಾಲೇಜಿಗೆ ಪಿಕ್-ಡ್ರಾಪ್ ಮಾಡುತ್ತಿದ್ದರು. ಇಂದು ನಾನು ಏನೇ ಆಗಿದ್ದರೂ ಅದಕ್ಕೆ ಕಾರಣ ಅವರು. ಇನ್ನು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಅವರನ್ನೊಮ್ಮೆ ಕೇಳುತ್ತೇನೆ. ಆದರೆ, ಅವರು ನನಗೇ ನಿರ್ಧಾರ ಬಿಟ್ಟು, ನನ್ನ ಸಂತೋಷದಲ್ಲಿಯೇ ನಗು ಕಾಣುತ್ತಾರೆ. ದೀಪಾವಳಿ, ಗಣೇಶ ಚತುರ್ಥಿಗೆ ಇಡೀ ಕುಟುಂಬ ಸೇರುತ್ತೇವೆ. ಆಗ ೆನ್‌ಗಳನ್ನು ಮೂಲೆಗೆಸೆದು ಆದಷ್ಟು ಮಾತನಾಡುತ್ತೇವೆ. ಖುಷಿ ಹಂಚಿಕೊಳ್ಳುತ್ತೇವೆ. ವಿಭಕ್ತ, ಅವಿಭಕ್ತ ಕುಟುಂಬ ಎಂಬುದಕ್ಕಿಂತ ನಾವು ಎಷ್ಟು ಜನ ಇದ್ದರೂ ಸಾಮರಸ್ಯದಿಂದ ಬದುಕಬೇಕು. ಸಂಬಂಧಗಳನ್ನು ಗೌರವಿಸಬೇಕು. ಆಗ ಮಾತ್ರ ಕುಟುಂಬ ಪದ್ದತಿಗೆ ಮೌಲ್ಯ ಬರುತ್ತದೆ.

| ರೇಷ್ಮಾ ಲಿಂಗರಾಜಪ್ಪ, ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net