

ನವದೆಹಲಿ: ಭೋಪಾಲ್ನಿಂದ ದೆಹಲಿಗೆ ತೆರಳಬೇಕಿದ್ದ ನಾಲ್ವರ ಸುರಕ್ಷತೆಗಾಗಿ ಕುಟುಂಬವೊಂದು ಇಡೀ ವಿಮಾನವನ್ನೇ ಬುಕ್ ಮಾಡಿತ್ತು. ಸಾಮಾನ್ಯವಾಗಿ ಬಾಡಿಗೆ ಉದ್ದೇಶಕ್ಕೆ ಲಘು ವಿಮಾನಗಳನ್ನು ಬಳಸಲಾಗುತ್ತದೆಯಾದರೂ, ಇವರು ಸಾಗಿದ್ದು ಮಾತ್ರ 180 ಸೀಟು ಸಾಮರ್ಥ್ಯದ ಏರ್ಬಸ್ 320 ವಿಮಾನದಲ್ಲಿ.
ಭೋಪಾಲ್ ವಿಮಾನ ನಿಲ್ದಾಣಕ್ಕೆ ಮಹಾರಾಜ ಭೋಜ್ ಹೆಸರನ್ನಿಡಲಾಗಿದೆ. ಮಹಾರಾಜನ ಶ್ರೀಮಂತಿಕೆ ಹೊಂದಿದ ಕುಟುಂಬ ಇದಾಗಿರಬಹುದೇನೋ? ಇಷ್ಟಕ್ಕೂ ನಾಲ್ವರನ್ನು ಕರೆದೊಯ್ಯಲು ಏರ್ಬಸ್-320 ವಿಮಾನ ದೆಹಲಿಯಿಂದ ಕೇವಲ ಸಿಬ್ಬಂದಿಯನ್ನು ಹೊತ್ತು ಬಂದಿತ್ತು. ಭೋಪಾಲ್ನಿಂದ ಮಡದಿ, ಇಬ್ಬರು ಮಕ್ಕಳು ಹಾಗೂ ದಾದಿಯನ್ನು ಹೊತ್ತು ಸಾಗಿತು.
ಕೋವಿಡ್ ಕಾಲಮಾನದಲ್ಲಿ ಮಡದಿ, ಮಕ್ಕಳ ಸುರಕ್ಷತೆಗಾಗಿ ಈ ಕ್ರಮ ಕೈಗೊಂಡಿರಬಹುದು. ಇದಕ್ಕಾಗಿ 10 ಲಕ್ಷ ರೂ. ವೆಚ್ಚವಾಗಿರಬಹುದು ಎಂದು ಅಂದಾಜಿಸಲಾಗಿದೆ.
ದೆಹಲಿಯಿಂದ 9.05ಕ್ಕೆ ಹೊರಟ ವಿಮಾನ 10.30ಕ್ಕೆ ಭೋಪಾಲ್ ತಲುಪಿದೆ. ಭೋಪಾಲ್ನಿಂದ 11.30ಕ್ಕೆ ಹೊರಟು 12.55ಕ್ಕೆ ದೆಹಲಿಗೆ ಆಗಮಿಸಿದೆ ಎಮದು ವಿಮಾನ ನಿಲ್ದಾಣಾಧಿಕಾರಿಗಳು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಜನದಟ್ಟಣೆ ನಡುವೆ ಪ್ರಯಾಣಿಸಲು ಇಚ್ಛಿಸಿದ ಅತಿ ಶ್ರೀಮಂತ ಕುಟುಂಬಗಳು ವಿಶೇಷ ವಿಮಾನ ಬಳಸುತ್ತಿವೆ. ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್ ಆದ ಮರುದಿನ ಯುರೋಪ್ನಿಂದ ಮುಂಬೈಗೆ ಮೂವರು ವಿಶೇಷ ವಿಮಾನದಲ್ಲಿ ಆಗಮಿಸಿದ್ದರು. ಇದಕ್ಕಾಗಿ ಅಂದಾಜು 80 ಲಕ್ಷ ರೂ. ವೆಚ್ಚವಾಗಿರಬಹುದು ಎಮದು ಅಂದಾಜಿಸಲಾಗಿದೆ.
ಕಳೆದ ಮೂರು ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣವೂ ಕೂಡ ಮುರು ವಿಶೇಷ ಅಥವಾ ಬಾಡಿಗೆ ವಿಮಾನಗಳನ್ನು ನಿರ್ವಹಿಸಿದೆ. ಬಾಡಿಗೆ ವಿಮಾನಗಳನ್ನು ಪ್ರತಿ ಗಂಟೆ ಅವಧಿಗೆ ದರ ನಿಗದಿ ಪಡಿಸಲಾಗುತ್ತದೆ. ವಿಮಾನದ ಇಂಧನದ ಬೆಲೆ ಆಧರಿಸಿ ಈ ದರ ನಿಗದಿಯಾಗುತ್ತದೆ. ಒಂದು ತಾಸಿನ ಪ್ರಯಾಣಕ್ಕೆ 4-6 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.