

ಬೆಂಗಳೂರು: ಕಾರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಯಾದವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ದಾಸರಹಳ್ಳಿ ಮರಿಯಣ್ಣಪಾಳ್ಯ ನಿವಾಸಿ ಸಂತೋಷ್‌ಕುಮಾರ್(೩೮) ಬಂಧಿತ ಆರೋಪಿ.
ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಸಂತೋಷ್‌ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ತಾನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಸಂತೋಷ್ ಮೂಲತಃ ತಮಿಳುನಾಡಿನವನಾಗಿದ್ದು, ಮೃತ ಕೃಷ್ಣಯಾದವ್ ಮತ್ತು ಆರೋಪಿ ಇಬ್ಬರು ಒಂದೇ ಏರಿಯಾದವರಾಗಿದ್ದು ಪರಸ್ಪರ ಪರಿಚಿತರಾಗಿದ್ದರು. ಮಾ.೧೧ ರಂದು ಸಂತೋಷ್ ಹಾಗೂ ಕೃಷ್ಣಯಾದವ್ ಇಬ್ಬರು ಜತೆಯಾಗಿ ಮದ್ಯಸೇವಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೃಷ್ಣಯಾದವ್ ತನ್ನ ಪತ್ನಿ ಮತ್ತು ಪುತ್ರನ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಹೀಗಾಗಿ
ಆತನನ್ನು ಕೊಲೆ ಮಾಡಿದ್ದೇನೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ಈ ಸಂಬಂಧ ಆರೋಪಿಯನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುವುದು. ಹೆಚ್ಚಿನ ವಿಚಾರಣೆಯ ನಂತರ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಾಕುವಿನಿಂದ ಇರಿದು ಕೊಲೆ:
ಮೃತ ಕೃಷ್ಣಯಾದವ್ ಮದ್ಯದ ಅಮಲಿನಲ್ಲಿ ಸಂತೋಷ್‌ನ ಪತ್ನಿಯ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಇಬ್ಬರು ನಡುವೆ ಮಾತಿಗೆ ಮಾತು ಬೆಳೆದು ಶುರುವಾದ ಜಗಳವು ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡು ಕಾರಿನಲ್ಲಿದ್ದ ಚಾಕು ತೆಗೆದುಕೊಂಡ ಸಂತೋಷ್‌ಗೆ ಮನಬಂದಂತೆ ಕೃಷ್ಣಯಾದವ್‌ಗೆ ಇರಿದಿದ್ದ. ದಿಢೀರ್ ದಾಳಿಯಿಂದ ತಪ್ಪಿಸಿಕೊಳ್ಳಲು ಆಗದ ಕೃಷ್ಣ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಮತ್ತೊಂದೆಡೆ ಕೊಲೆ ನಡೆದ ಸ್ಥಳದಲ್ಲಿ ಮಹಿಳೆಯ ದುಪ್ಪಟ ಕೂಡ ಪತ್ತೆಯಾಗಿತ್ತು. ಆ ಆಯಾಮದಲ್ಲಿಯೂ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.