ಅಟ್ರಾಸಿಟಿಯಡಿ ಸುಳ್ಳು ಕ್ರಿಮಿನಲ್ ಪ್ರಕರಣ : ಇಂತಹ ಬೆಳವಣಿಗೆಯನ್ನು ತೊಡೆದು ಹಾಕಬೇಕು ಹೈಕೋರ್ಟ್

High Court (1)
Published on

ಬೆಂಗಳೂರು: ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲಿಸುವುದರಿಂದ ಅಪರಾಧಿಕ ನ್ಯಾಯದಾನ ವ್ಯವಸ್ಥೆಗೆ ಅಡ್ಡಿ ಉಂಟು ಮಾಡುತ್ತಿದ್ದು, ನ್ಯಾಯಾಲಯದ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತಿದೆ. ಇಂತಹ ಬೆಳವಣಿಗೆಯನ್ನು ತೊಡೆದು ಹಾಕಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸಿವಿಲ್ ವ್ಯಾಜ್ಯದ ಕುರಿತಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ-೧೯೮೯ ರ ಅಡಿ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ರಾಮಮೂರ್ತಿ ನಗರದ ಸಹೋದರರಾದ ರಸಿಕ್‌ಲಾಲ್ ಪಟೇಲ್ ಮತ್ತು ಪುರುಷೋತ್ತಮ್ ಪಟೇಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಜತೆಗೆ, ಅರ್ಜಿದಾರರ ವಿರುದ್ಧದ ಕೆ.ಆರ್.ಪುರ ನಿವಾಸಿ ಪುರುಷೋತ್ತಮ್ ಎಂಬುವರು ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.

ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸುವುದು ಕಾನೂನಿನ ಪ್ರಕ್ರಿಯೆ ಸ್ಪಷ್ಟ ದುರುಪಯೋಗವಾಗುತ್ತದೆ. ಇಂತಹ ಬೆಳವಣಿಗೆಯನ್ನು ತೊಡೆದು ಹಾಕದಿದ್ದರೆ ಇಡೀ ಅಪರಾಧಿಕ ನ್ಯಾಯದಾನ ವ್ಯವಸ್ಥೆಗೆ ದೊಡ್ಡ ಹೊರೆಯಾಗಬಹುದು. ಇಂತಹ ಪ್ರಕರಣದಲ್ಲಿ ಸಿಲುಕುವವರಿಗೆ ಕಿರುಕುಳ ಉಂಟಾಗಲಿದ್ದು, ನ್ಯಾಯದಾನ ವ್ಯವಸ್ಥೆ ಹಾದಿ ತಪ್ಪಿಬಹುದು ಎಂದು ಕೋರ್ಟ್ ಹೇಳಿದೆ.

ಏನಿದು ಪ್ರಕರಣ?
ರಸಿಕ್‌ಲಾಲ್ ಮತ್ತು ಪುರುಷೋತ್ತಮ್ ಎಂಬುವರ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ತಮಗೆ ನಿರಂತರ ಕಿರುಕುಳ ನೀಡುತ್ತಿದ್ದು, ಮನೆಯ ಜಾಗವನ್ನೂ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಪುರುಷೊತ್ತಮ್ ಎಂಬಾತ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ರಾಮಮೂರ್ತಿ ನಗರದ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣ ರದ್ದುಪಡಿಸಲು ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ದೂರುದಾರರ ತಂದೆ ತಮ್ಮ ಜಮೀನನ್ನು ಅರ್ಜಿದಾರರಿಗೆ ಮಾರಾಟ ಮಾಡಿದ್ದಾರೆ. ಆ ಆಸ್ತಿಯನ್ನು ಅರ್ಜಿದಾರರು ಕಳೆದ ೫೦ ವರ್ಷಗಳಿಂದ ತಮ್ಮಲ್ಲಿ ಉಳಿಸಿಕೊಂಡಿದ್ದಾರೆ. ಈ ಕುರಿತು ಸರ್ಕಾರಿ ದಾಖಲೆಗಳಿವೆ. ಅರ್ಜಿದಾರರು ಜಮೀನು ಖರೀದಿ ಮಾಡಿದ್ದಾರೆ ವಿನಾ ಒತ್ತುವರಿ ಮಾಡಿಲ್ಲ. ಆದರೂ, ಅರ್ಜಿದಾರರ ವಿರುದ್ಧ ದೂರುದಾರರು ಸುಳ್ಳು ಆರೋಪ ಮಾಡಿ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಕಾಯ್ದೆ ದುರ್ಬಳಕೆಯಾಗುತ್ತಿರುವುದಕ್ಕೆ ಈ ಪ್ರಕರಣ ಉತ್ತಮ ಉದಾಹರಣೆಯಾಗಿದೆ. ನೈಜ ಪ್ರಕರಣಗಳಲ್ಲಿ ಕಕ್ಷಿದಾರರು ಸರತಿ ಸಾಲಿನಲ್ಲಿ ನಿಂತು ನ್ಯಾಯಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ನ್ಯಾಯಾಲಯ ಸುಳ್ಳು ಮೊಕದ್ದಮೆಗಳ ಪರ್ವತವನ್ನು ಶೋಧನೆ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net