ಪುತ್ತೂರು: ಸಹಪಾಠಿ ಯುವತಿಗೆ ವಿವಾಹದ ಭರವಸೆ ನೀಡಿ ಅತ್ಯಾಚಾರ ಎಸಗಿ ವಂಚಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿ ಶ್ರೀಕೃಷ್ಣ ಜೆ.ರಾವ್ ಸಂತ್ರಸ್ತೆಯನ್ನು ವಿವಾಹವಾಗಲು ನಿರಾಕರಿಸಿದ್ದಾಗಿ ಯುವತಿಯ ತಾಯಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಅತ್ಯಾಚಾರ ಹಾಗೂ ವಂಚನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶ್ರೀಕೃಷ್ಣ ‘ಬೇಕಿದ್ದರೆ ಜೈಲಿನಲ್ಲಿರುತ್ತೇನೆ, ಆದರೆ ಆಕೆಯನ್ನು ಮದುವೆಯಾಗಲಾರೆ’ ಎಂದು ಪಟ್ಟು ಹಿಡಿದಿದ್ದಾನೆಂದು ಸಂತ್ರಸ್ತೆಯ ತಾಯಿ ನಮಿತಾ ತಿಳಿಸಿದ್ದಾರೆ.
ಹುಡುಗನಿಗೆ ೨೧ ವರ್ಷ ತುಂಬಿದ ಬಳಿಕ ಮದುವೆ ಮಾಡಿಸಿಕೊಡುವುದಾಗಿ ಕಾನೂನಿನ ಮೂಲಕವೇ ನಮಗೆ ಭರವಸೆ ನೀಡಲಾಗಿತ್ತು. ಅದನ್ನು ನಂಬಿ ನಾವು ಎಫ್‌ಐಆರ್ ಹಿಂಪಡೆದು, ಒಂದುವರೆ ತಿಂಗಳು ಕಾದೆವು. ಆದರೆ ಈಗ ಕಾನೂನು ‘ಹುಡುಗನಿಗೆ ಒಪ್ಪಿಗೆ ಇಲ್ಲದಿದ್ದರೆ ಮದುವೆ ಸಾಧ್ಯವಿಲ್ಲ’ ಎನ್ನುತ್ತಿದೆ. ಇದು ಎಂಥಾ ನ್ಯಾಯ? ಹುಡುಗನಿಗೆ ಒಂದು ನ್ಯಾಯ, ನಮ್ಮ ಮಗಳಿಗೆ ಇನ್ನೊಂದು ನ್ಯಾಯವೇ? ಹುಡುಗ ಜೈಲಿಗೆ ಹೋಗಿ ಬಂದಾನು, ಆದರೆ ನನ್ನ ಮಗಳ ಜೀವನಕ್ಕೆ ಏನು ಗತಿ? ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈ, ಬಜರಂಗದಳ ಹಾಗೂ ಹಿಂದು ಸಂಘಟನೆಗಳ ಮುಖಂಡರು ಮಧ್ಯಸ್ಥಿಕೆ ವಹಿಸಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದು, ಈಗ ಅವರೆಲ್ಲರೂ ಮುಂದೆ ನಿಂತು ಆ ವಾಗ್ದಾನವನ್ನು ಈಡೇರಿಸಬೇಕು. ನಾವು ಅವರನ್ನು ನಂಬಿ ಕೂತಿದ್ದೇವೆ. ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಆರೋಪಿಗೆ ಶಿಕ್ಷೆ ನೀಡುವುದಕ್ಕಿಂತ, ನನ್ನ ಮಗಳಿಗೆ ನ್ಯಾಯ ಒದಗಿಸುವುದು ಮುಖ್ಯ. ದಯವಿಟ್ಟು ನಮ್ಮ ಮಗಳ ಮದುವೆ ಮಾಡಿಸಿ, ಆಕೆಯ ಜೀವನವನ್ನು ಉಳಿಸಿಕೊಡಿ. ಇದಕ್ಕಿಂತ ಬೇರೆ ಏನನ್ನೂ ನಾವು ಕೇಳುತ್ತಿಲ್ಲ ಎಂದು ಆಗ್ರಹಿಸಿದ್ದಾರೆ.