Hyderabad Counterfeit Currency: ಹೈದರಾಬಾದ್‌ನಲ್ಲಿ ಬೃಹತ್ ಕಳ್ಳನೋಟು ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಸುಮಾರು 6.78 ಕೋಟಿ ರೂ. ಮುಖಬೆಲೆಯ ನಕಲಿ 500 ರೂಪಾಯಿ ನೋಟುಗಳನ್ನು ಜಪ್ತಿ ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ 4 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಅಬ್ದುಲ್ಲಾಪುರಮೇಟ್ ಪೊಲೀಸ್ ಹಾಗೂ ಶಾದ್‌ನಗರ ಎಸ್‌ಒಟಿ ಜಂಟಿ ದಾಳಿಯಲ್ಲಿ ಈ ಜಾಲ ಧ್ವಂಸಗೊಂಡಿದೆ ಎಂದು ಕಮಿಷನರ್ ಡಾ. ತರುಣ್ ಜೋಶಿ ಹೇಳಿದ್ದಾರೆ. ನವೆಂಬರ್ 1 ರಂದು ರಾ.ಹೆ.-65 ರಾಮೋಜಿ ಫಿಲ್ಮ್ ಸಿಟಿ ಬಳಿ ಕಾರು ತಡೆದ ಪೊಲೀಸರು ಮಡುಪೋಜು ಕರುಣಾಕರ್, ಚಿನ್ನೊಲ್ಲ ಮಾಣಿಕ್ಯ ರೆಡ್ಡಿ, ಚೆರುಕುಪೆಲ್ಲಿ ರತ್ನಾಕರ್ ರೆಡ್ಡಿ ಮತ್ತು ಕರಣಂ ಅಜಯ್ ಕುಮಾರ್‌ನನ್ನು ಬಂಧಿಸಿದ್ದಾರೆ.
ಬಂಧಿತರ ನೀಡಿದ ಮಾಹಿತಿ ಮೇರೆಗೆ ಕುಂಟ್ಲೂರ್‌ನ ಬಾಡಿಗೆ ಮನೆಯೊಂದರಲ್ಲಿದ್ದ ನಕಲಿ ನೋಟು ಮುದ್ರಣ ಘಟಕದ ಮೇಲೆ ದಾಳಿ ನಡೆಸಿದ ಪೊಲೀಸರು, ನೋಟು ಮುದ್ರಣಕ್ಕೆ ಬಳಸುತ್ತಿದ್ದ ಪ್ರಿಂಟರ್‌ಗಳು, ಲ್ಯಾಪ್‌ಟಾಪ್ ಹಾಗೂ ನೋಟು ಕಟಿಂಗ್ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
‘ಗ್ಯಾಂಗ್‌ನಲ್ಲಿದ್ದವರು ನಕಲಿ ಐಡಿ, ವಾಕಿ-ಟಾಕಿ ಮತ್ತು ಡಮ್ಮಿ ಪಿಸ್ತೂಲ್ ಹಿಡಿದು ನಿಜವಾದ ಪೊಲೀಸರಂತೆ ನಟಿಸಿ ಜನರನ್ನು ಹೆದರಿಸಿ ಲೂಟಿ ಮಾಡುತ್ತಿದ್ದರು’ ಎಂದು ಕಮಿಷನರ್ ತಿಳಿಸಿದ್ದಾರೆ. ಮೊದಲಿಗೆ 1 ಲಕ್ಷ ಅಸಲಿ ನೋಟಿಗೆ 3 ರಿಂದ 4 ಲಕ್ಷ ನಕಲಿ ಹಣ ಕೊಡುವುದಾಗಿ ಆಮಿಷ ಒಡ್ಡಿದ್ದ ಈ ಕದೀಮರು, ಆ ಪ್ಲಾನ್ ಯಶಸ್ವಿಯಾಗದಿದ್ದಾಗ ಹೊಸ ರೀತಿಯ ಸ್ಕೀಮ್ ಶುರು ಮಾಡಿದ್ದರು.
ಮೊದಲು ಅಸಲಿ ನೋಟು ತೋರಿಸಿ ಗ್ರಾಹಕರ ನಂಬಿಕೆ ಗಳಿಸುತ್ತಿದ್ದ ಗ್ಯಾಂಗ್, ನಂತರ ನಕಲಿ ಪೊಲೀಸರಂತೆ ದಾಳಿ ಮಾಡಿ ಕೇಸ್ ಹಾಕುವುದಾಗಿ ಬೆದರಿಸಿ ಹಣದೊಂದಿಗೆ ಪರಾರಿಯಾಗುತ್ತಿತ್ತು. ಹೀಗೆ ಇಬ್ಬರಿಂದ ಕ್ರಮವಾಗಿ 2 ಲಕ್ಷ ಹಾಗೂ 3 ಲಕ್ಷ ರೂ. ದೋಚಿದ್ದರು. ಪ್ರಸ್ತುತ 6.78 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.