ಪೋರ್ನ್​ ವೆಬ್​ಸೈಟ್​ನಲ್ಲಿ ಇಟಲಿ ಪ್ರಧಾನಿ, ವಿಪಕ್ಷ ನಾಯಕಿಯ ನಕಲಿ ಫೋಟೋ; ಪಿಎಂ ಮೆಲೋನಿ ಆಕ್ರೋಶ| Giorgia Meloni

George meloni
Published on

Giorgia Meloni: ಪೋರ್ನ್​ ವೆಬ್​ಸೈಟ್​ನಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಸಹೋದರಿ ಆರಿಯಾನ ಮೆಲೋನಿ ಹಾಗೂ ವಿರೋಧ ಪಕ್ಷದ ನಾಯಕಿ ಎಲ್ಲಿ ಶ್ಲೀನ್, ನಟಿ ಪಾವೋಲಾ ಕಾರ್ಟೆಲೆಸ್ಸಿ ಸೇರಿ ಹಲವರು ಪ್ರಮುಖ ಮಹಿಳೆಯರ ಮಾರ್ಪ್ ಮಾಡಿದ ನಕಲಿ ಚಿತ್ರಗಳನ್ನು ಹಾಕಿದ್ದಕ್ಕೆ ಶನಿವಾರ(ಆಗಸ್ಟ್ 30) ಪ್ರಧಾನಿ ಜಾರ್ಜಿಯಾ ಮೆಲೋನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಿಕಾ ಎಂಬ ಹೆಸರಿನ ಅಶ್ಲೀಲ ವೆಬ್‌ಸೈಟ್‌ನಲ್ಲಿ ಮೆಲೋನಿ ಸೇರಿ ಉನ್ನನ ಮಹಿಳೆಯರ ಸಾಮಾಜಿಕ ಮಾಧ್ಯಮ, ರ‍್ಯಾಲಿಗಳು, ಸಾರ್ವಜನಿಕ ಕಾರ್ಯಕ್ರಮಗಳು, ರಜಾ ದಿನಗಳಲ್ಲಿ ತೆಗೆದ ಚಿತ್ರಗಳನ್ನು ತೆಗದುಕೊಂಡು ದೇಹದ ಭಾಗಗಳನ್ನು ಲೈಂಗಿಕವಾಗಿ ಪ್ರಚೋದಿಸುವಂತೆ ತಿರುಚಲಾಗಿದ್ದು, ಸೈಟ್‌ನ “ವಿಐಪಿ ವಿಭಾಗ”ದಲ್ಲಿ ಅಸಭ್ಯ ಮತ್ತು ಲಿಂಗಾಧಾರಿತ ಶೀರ್ಷಿಕೆಗಳೊಂದಿಗೆ ಕಂಡು ಬಂದಿವೆ.

ಈ ಕುರಿತು ಮಾತನಾಡಿರುವ ಮೆಲೋನಿ, ಇದು ಮಹಿಳೆಯರ ಘನತೆಯನ್ನು ತುಳಿಯುವಂತಹ ಕೆಲಸ. ಅಸಹ್ಯಕರ, ಇಂತಹ ಕೃತ್ಯವನ್ನು ಮಾಡಿದವರನ್ನು ಸರಿಯಾಗಿ ಶಿಕ್ಷಿಸಲಾಗುವುದು. ಇದರಿಂದ ಮನನೊಂದ, ಅವಮಾನಿತ ಮತ್ತು ದೌರ್ಜನ್ಯಕ್ಕೊಳಗಾದ ಎಲ್ಲಾ ಮಹಿಳೆಯರಿಗೆ ನನ್ನ ಒಗ್ಗಟ್ಟು ಮತ್ತು ಬೆಂಬಲವನ್ನು ನೀಡಲು ನಾನು ಬಯಸುತ್ತೇನೆ. 2025 ರಲ್ಲೂ ಸಹ ಮಹಿಳೆಯ ಘನತೆಯನ್ನು ತುಳಿಯುವುದು ಸಾಮಾನ್ಯ ಎಂದು ಭಾವಿಸುವ ಜನರಿರುವುದು ಖೇದಕರ ಎಂದು ಎಂದು ವಾಗ್ದಾಳಿ ನಡೆಸಿದ್ದಾರೆ.

ಫಿಕಾ ಎಂಬುದು ಇಟಾಲಿಯನ್ ಭಾಷೆಯಲ್ಲಿ ಯೋನಿಯ ಸಾಮಾನ್ಯ ಹೆಸರಿನಿಂದ ಕರೆಯಲ್ಪಟ್ಟ ವೆಬ್‌ಸೈಟ್ ಆಗಿದೆ. 7 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿತ್ತು ಎನ್ನಲಾಗಿದೆ. ಮೆಲೋನಿ ಟೀಕೆ ಬಳಿಕ ವ್ಯಾಪಕ ಖಂಡನೆ ಮತ್ತು ಡೆಮಾಕ್ರಟಿಕ್ ಪಾರ್ಟಿಯ (ಪಿಡಿ) ರಾಜಕಾರಣಿಗಳಾದ ವಲೇರಿಯಾ ಕ್ಯಾಂಪಾಗ್ನಾ, ಅಲೆಸಿಯಾ ಮೊರಾನಿ ಮತ್ತು ಅಲೆಸಾಂಡ್ರಾ ಮೊರೆಟ್ಟಿಯವರಂತಹ ಮಹಿಳೆಯರಿಂದ ದೂರು ಬಂದ ನಂತರ ಆಗಸ್ಟ್ 29ರಂದು ಅದನ್ನು ಮುಚ್ಚಲಾಗಿದೆ.

ಟೆಕ್ ಕಂಪನಿ ಮೆಟಾ "ಮೈ ವೈಫ್" ಎಂಬ ಅರ್ಥ ನೀಡುವ ಇಟಾಲಿಯನ್ ಫೇಸ್‌ಬುಕ್ ಖಾತೆಯಾದ ಮಿಯಾ ಮೊಗ್ಲಿಯನ್ನು ಸಹ ಮುಚ್ಚಿದೆ. ಅಲ್ಲಿ ಪುರುಷರು ತಮ್ಮ ಹೆಂಡತಿಯರು ಅಥವಾ ಅಪರಿಚಿತ ಮಹಿಳೆಯರ ಆತ್ಮೀಯ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರೆಂದು ಆರೋಪಿಸಲಾಗಿದೆ. ಈ ಗುಂಪಿನಲ್ಲಿ 32,000 ಕ್ಕೂ ಹೆಚ್ಚು ಸದಸ್ಯರಿದ್ದರು. ಮಧ್ಯ-ಎಡ ಡೆಮಾಕ್ರಟಿಕ್ ಪಕ್ಷದ ರಾಜಕಾರಣಿಗಳಿಂದ ದೂರುಗಳು ಬಂದ ನಂತರ ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net