'ಕೆಲಸಕ್ಕೆ ಅರ್ಜಿ ಆಹ್ವಾನ' ಅಂತ ನಿಮಗೂ ಸಂದೇಶ ಬಂದಿದ್ಯಾ?: ನಂಬಿ ಮೋಸ ಹೋಗ್ಬೇಡಿ!

Job Opportunity
Published on

ಬೆಂಗಳೂರು: ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ಬಳಿ ಎಚ್ಎಎಲ್​ ಘಟಕ ಲೋಕಾರ್ಪಣೆ ಮಾಡಿದ್ದರು. ಆದರೆ ಇದನ್ನೇ ನೆಪವಾಗಿಟ್ಟುಕೊಂಡಿರುವ ಕೆಲವು ವಂಚಕರು 'ಎಚ್​ಎಎಲ್​ನಿಂದ ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ, ಕೂಡಲೇ ಸಂಪರ್ಕಿಸಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಕೆಲವರು ಈ ದಂಧೆಗೆ ಇಳಿದಿದ್ದಾರೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.

ಎಚ್ಎಎಲ್​ ಘಟಕಕ್ಕೆ ಐಟಿಐ, ಡಿಪ್ಲೊಮಾ ಆಗಿರುವವರು ಯಾರಾದರೂ ಇದ್ದಲ್ಲಿ ಅರ್ಜಿ ಸಲ್ಲಿಸಿ, ಸ್ಥಳೀಯರು ಮತ್ತು ನಿಮ್ಮ ಅಕ್ಕಪಕ್ಕದವರಿಗೂ ತಿಳಿಸಿ. ನಮ್ಮವರು ಪ್ರಯತ್ನ ಪಡದೆ ಹೋದರೆ ಉತ್ತರ ಭಾರತದ ರಾಜ್ಯಗಳಿಂದ ಕೆಲಸಕ್ಕೆ ಬರುತ್ತಾರೆ, ಕನ್ನಡಿಗರು ಉದ್ಯೋಗದಿಂದ ವಂಚಿತರಾಗುತ್ತಾರೆ. ಆದ ಕಾರಣ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು ಎಂದೆಲ್ಲಾ ಬರೆದುಕೊಂಡು ವಾಟ್ಸ್​ಆ್ಯಪ್​, ಫೇಸ್‌ಬುಕ್​ಗಳಲ್ಲಿ ಹರಿಯಬಿಡುತ್ತಿದ್ದಾರೆ. ವ್ಯವಸ್ಥಾಪಕ ಶಿವಕುಮಾರ್ ಎಂಬ ಹೆಸರು ಸೇರಿದಂತೆ ಇತರೆ ಕೆಲವರ ಹೆಸರನ್ನು ಹಾಕಿಕೊಂಡು ಒಂದೆರಡು ಮೊಬೈಲ್​ಫೋನ್​ ಸಂಖ್ಯೆಗಳನ್ನೂ ಅದರಲ್ಲಿ ನಮೂದಿಸಿದ್ದಾರೆ. ಆದರೆ ಇಂಥ ಯಾವುದೇ ಅರ್ಜಿ ಆಹ್ವಾನಿಸಿಲ್ಲ, ಅದು ಸುಳ್ಳು ಎಂಬ ಸ್ಪಷ್ಟನೆಯೊಂದು ಹೊರಬಿದ್ದಿದೆ.

ಈಗಾಗಲೇ ಉದ್ಯೋಗ ಕಳೆದುಕೊಂಡಿರುವವರು, ಉದ್ಯೋಗದ ನಿರೀಕ್ಷೆಯಲ್ಲಿರುವವರು, ಐಟಿಐ ಪಾಸ್ ಆಗಿರುವವರು, ಉದ್ಯೋಗಕ್ಕಾಗಿ ಕಾಯುತ್ತಿರುತ್ತಾರೆ. ಯಾವುದದಾದರೂ ಕಂಪನಿ ಅಥವಾ ಉದ್ದಿಮೆಗಳಲ್ಲಿ ಅವಕಾಶ ಸಿಕ್ಕರೆ ಸಾಕು ಎಂಬ ಮನಸ್ಥಿತಿ ಅವರಲ್ಲಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವು ವಂಚಕರು ತಮ್ಮ ಮೊಬೈಲ್​ಫೋನ್​ ಸಂಖ್ಯೆಗಳನ್ನು ಹಾಕಿಕೊಂಡು ಹಣ ಪೀಕುವ ದಂಧೆಗೆ ಇಳಿದಿದ್ದಾರೆ. ಇಂತಹ ಸಂದೇಶಗಳನ್ನು ನಂಬಿ ಉದ್ಯೋಗಾಕಾಂಕ್ಷಿಗಳು ವಂಚನೆಗೆ ಒಳಗಾಗಬಾರದೆಂದು ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net