

ಬೆಂಗಳೂರು: ಶಾಸಕರ ಹೆಸರಿನಲ್ಲಿ ಸಹಿ ೆರ್ಜರಿ ಮಾಡಿ ಮತ್ತು ಲೆಟರ್ ಹೆಡ್ ನಕಲು ಮಾಡಿ ವಿಧಾನಸಭೆ ಸಚಿವಾಲಕ್ಕೆ ಪತ್ರ ಬರೆದು ಉದ್ಯೋಗ ಕೊಡಿಸಿ ಸಂಬಳ ಪಡೆದಿದ್ದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪರ ಸಹಿಯನ್ನು ನಕಲು ಮಾಡಿ ಲೆಟರ್ ಹೆಡ್ ಸೃಷ್ಟಿಸಿ ಆಪ್ತ ಸಹಾಯಕರ ಹುದ್ದೆ ಗಿಟ್ಟಿಸಿಕೊಂಡು ಹಲವು ತಿಂಗಳು ವೇತನ ಪಡೆದಿದ್ದ ವಂಚಕರ ಜಾಲ ಪತ್ತೆ ಮಾಡಿರುವ ವಿಧಾನಸೌಧ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆ ಕುದೂರು ನಿವಾಸಿ ಸ್ವಾಮಿ(೩೫) ಹಾಗೂ ಅಂಜನ್‌ಕುಮಾರ್(೩೫) ಬಂಧಿತರು. ಪ್ರಕರಣದ ಮತ್ತೊಬ್ಬ ಆರೋಪಿ ಕೆ.ಸಿ.ವಿನುತಾ ಎಂಬುವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಓದಿರುವ ಸ್ವಾಮಿ, ಈ ಹಿಂದೆ ಪರಿಚಿತ ಶಾಸಕರ ನೆರವಿನಿಂದ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದ. ನಂತರ ಆ ಕೆಲಸ ಬಿಟ್ಟಿದ್ದ ಆತ ರಾಜಕಾರಣಿಗಳ ಜತೆ ಓಡಾಡಿಕೊಂಡಿದ್ದ. ಶಾಮನೂರು ಶಿವಶಂಕರಪ್ಪ ಅವರು ವಿನುತಾಳನ್ನು ತಮ್ಮ ಆಪ್ತ ಸಹಾಯಕಿಯಾಗಿ ನೇಮಿಸಲು ಶಿಾರಸು ಮಾಡಿದಂತೆ ಸ್ವಾಮಿ, ಖೊಟ್ಟಿ ಲೆಟರ್ ಹೆಡ್ ಸೃಷ್ಟಿಸಿ ಅದಕ್ಕೆ ಅವರ ೆರ್ಜರಿ ಸಹಿ ಮಾಡಿದ್ದ. ನಂತರ ಆ ಶಿಾರಸು ಪತ್ರವನ್ನು ವಿಧಾನಸಭೆ ಸಚಿವಾಲಯಕ್ಕೆ ಕಳುಹಿಸಿದ್ದ. ಆ ಪತ್ರದ ನೈಜತೆಯನ್ನು ಪರಿಶೀಲಿಸದ ವಿಧಾನಸಭೆ ಸಚಿವಾಲಯ ಸಿಬ್ಬಂದಿಯು ವಿನುತಾಳನ್ನು ಶಾಮನೂರು ಶಿವಶಂಕರಪ್ಪರ ಆಪ್ತ ಸಹಾಯಕಿಯಾಗಿ ನೇಮಿಸಿ ೨೦೨೩ರ ಮೇ ತಿಂಗಳಲ್ಲಿ ಆದೇಶ ಹೊರಡಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆರಿಗೆ ರಜೆಗೆ ಮುಂದಾದಾಗ ಪ್ರಕರಣ ಬೆಳಕಿಗೆ:
ವಂಚಕ ಸ್ವಾಮಿಯ ಪತ್ನಿಯಾದ ವಿನುತಾ, ವಿಧಾನಸೌಧದಲ್ಲಿನ ಶಾಮನೂರು ಶಿವಶಂಕರಪ್ಪರ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲೇ ಇದ್ದುಕೊಂಡು ಕಳೆದೊಂದು ವರ್ಷದಿಂದ ವೇತನ ಪಡೆದಿದ್ದಳು. ವಿಧಾನಸಭೆ ಸಚಿವಾಲಯದಿಂದ ಪ್ರತಿ ತಿಂಗಳು ವಿನುತಾಳ ಬ್ಯಾಂಕ್ ಖಾತೆಗೆ ೩೦ ಸಾವಿರ ಸಂಬಳದ ಹಣವನ್ನು ಪಾವತಿಸಲಾಗಿತ್ತು. ಗರ್ಭಿಣಿಯಾದ ವಿನುತಾ, ಶಾಸಕರ ಆಪ್ತ ಸಹಾಯಕಿ ಹುದ್ದೆಯ ಜವಾಬ್ದಾರಿಯಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಇತ್ತೀಚೆಗೆ ವಿಧಾನಸಭೆ ಸಚಿವಾಲಯಕ್ಕೆ ಪತ್ರ ಬರೆದಿದ್ದಳು. ವಿಧಾನಸಭೆ ಸಚಿವಾಲಯದ ಸಿಬ್ಬಂದಿಯು ಈ ಪತ್ರದ ಬಗ್ಗೆ ಅನುಮಾನಗೊಂಡು ಪರಿಶೀಲಿಸಿದಾಗ ಸ್ವಾಮಿ ಮತ್ತು ವಿನುತಾ ದಂಪತಿಯ ವಂಚನೆ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.