

ಕಿರುವಾರ ಎಸ್. ಸುದರ್ಶನ್ ಕೋಲಾರ
ಸಮೃದ್ಧವಾಗಿ ಫಸಲು ಬರಲಿ ಎಂದು ಸಾಲಸೋಲ ಮಾಡಿ ಬೆಳೆಗಳಿಗೆ ಹಾಕುವ ರಸಗೊಬ್ಬರವೇ ನಕಲಿ…
ಹೌದು. ಗಡಿ ಜಿಲ್ಲೆಯಲ್ಲಿ ನಕಲಿ ಗೊಬ್ಬರ ಮಾರಾಟ ಬೆಳಕಿಗೆ ಬಂದಿದ್ದು, ರೈತರ ದುಗುಡಕ್ಕೆ ಕಾರಣವಾಗಿದೆ.
ಇದಕ್ಕೆ ನಿದರ್ಶನವೆಂಬಂತೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ತಾವರೆಕೆರೆ ರೈತ ಟಿ.ವಿ.ರಾಜೇಶ್ ನಕಲಿ ಗೊಬ್ಬರ ಮಾರಾಟ ಜಾಲತದಿಂದ ಎರಡು ಬಾರಿ ಮೋಸ ಹೋಗಿದ್ದು, ಈಗ ರೈತ ದಂಧೆಕೋರರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಬೆಳಕಿಗೆ ಬಂದದ್ದು ಹೇಗೆ: 2024ರ ಜುಲೈನಲ್ಲಿ ರೈತ ರಾಜೇಶ್ ಟೊಮ್ಯಾಟೊ ಬೆಳೆಗೆಂದು ಡಿಎಪಿ, ಬೇವಿನ ಹಿಂಡಿ ಪೋಟ್ಯಾಷಿಯಂ ಖರೀದಿಸಿ ಭೂಮಿಗೆ ಹಾಕಿದ್ದರು. ಆದರೆ, ಎರಡು ತಿಂಗಳು ಕಳೆದರೂ ರಸಗೊಬ್ಬರ ಕರಗಿಲ್ಲ. ಈ ಪರಿಣಾಮ ಬೆಳೆ ನಷ್ಟವಾಗಿದ್ದು, ಸಂಕಷ್ಟಕ್ಕೆ ಒಳಗಾಗಿರುವ ರೈತ ನಕಲಿ ಗೊಬ್ಬರ ಮಾರಾಟಗಾರರ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ.
ಇದಕ್ಕೂ ಮೊದಲು ಗೊಬ್ಬರ ಕರಗದ ಬಗ್ಗೆ ಅಂಗಡಿ ಮಾಲೀಕನನ್ನು ವಿಚಾರಿಸಿದಾಗ ಬೆದರಿಕೆ ಹಾಕಿದ್ದಾನೆ. ನಂತರ ತಾಲೂಕು ಕೃಷಿ ಇಲಾಖೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
2022ರಲ್ಲಿ ರಾಜೇಶ್ ಇದೇ ಸಮಸ್ಯೆ ಅನುಭವಿಸಿ ದೂರು ನೀಡಿದ್ದರು. ಈ ವೇಳೆ ಇಲಾಖೆಯ ಜಾಗೃತ ದಳದ ಅಧಿಕಾರಿಗಳು ಖಾಸಗಿ ಅಂಗಡಿಯ ಮೇಲೆ ದಾಳಿ ಮಾಡಿದಾಗ ನಕಲಿ ಗೊಬ್ಬರ ಪತ್ತೆಯಾಗಿದ್ದು, ಆಗ ಅಂಗಡಿ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದರು.
ಅಂತೆಯೇ, ಜಿಲ್ಲೆಯ ಹಲವೆಡೆ ಈ ದಂಧೆ ಸದ್ದಿಲ್ಲದೆ ಸಕ್ರಿಯವಾಗಿದ್ದು, ಹಲವು ರೈತರು ವಂಚನೆಗೊಳಗಾಗಿ ಸಂಕಷ್ಟಕ್ಕೀಡಾಗಿದ್ದಾರೆ.
ಅನುಮಾನ ಮೂಡಿಸಿದ ಅಧಿಕಾರಿಗಳ ನಡೆ
ರೈತ ಟಿ.ವಿ.ರಾಜೇಶ್ ಅವರು ನಕಲಿ ಗೊಬ್ಬರ ಮಾದರಿ ಸಮೇತ ಮುಳಬಾಗಿಲು ಕೃಷಿ ಸಹಾಯ ಅಧಿಕಾರಿಗೆ ಜುಲೈ 25ರಂದು ದೂರು ನೀಡಿದ್ದಾರೆ. ಆಗ ಮಾದರಿಯನ್ನು ಬೆಂಗಳೂರಿನ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, ವರದಿಯಲ್ಲಿ ನಕಲಿ ಗೊಬ್ಬರ ಎಂದು ಸಾಬೀತಾಗಿದೆ. ಆದರೆ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಭೆಗಳಲ್ಲೂ ವ್ಯಾಪಕ ಚರ್ಚೆ:
ಕೋಲಾರ ಜಿಲ್ಲೆಯು ಆಂಧ್ರ, ತಮಿಳುನಾಡು ಗಡಿಯಲ್ಲಿ ಇರುವುದರಿಂದ ಅನುಮತಿ ಇಲ್ಲದ ಔಷಧ, ನಕಲಿ ರಸಗೊಬ್ಬರ, ಬಿತ್ತನೆ ಬೀಜಗಳು ಸರಬರಾಜು ಆಗುತ್ತಿವೆ. ನಕಲಿ ಬಿತ್ತನೆ ಬೀಜದ ಹಾವಳಿಗೆ ಕಡಿವಾಣ ಇಲ್ಲವಾಗಿದ್ದು, ಈ ಬಗ್ಗೆ ಕೆಡಿಪಿ ಸಭೆಗಳಲ್ಲೂ ವ್ಯಾಪಕ ಚರ್ಚೆಗಳು ಆಗಿದ್ದವು.
ಕಠಿಣ ಕ್ರಮವಿಲ್ಲ:
ನಕಲಿ ಗೊಬ್ಬರ ಮಾರಾಟ ಮಾಡಿದ ಪರಿಣಾಮದ 5 ಎಕರೆಯಲ್ಲಿ ಟೊಮ್ಯಾಟೊ ಇಳುವರಿ ಬರಲಿಲ್ಲ. ಇದರಿಂದಾಗಿ ಲಾಂತರ ರೂ. ನಷ್ಟವುಂಟಾಗಿದೆ. ಆಗಿರುವ ಅನ್ಯಾಯದ ಬಗ್ಗೆ ಕೃಷಿ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ರೈತ ಟಿ.ವಿ.ರಾಜೇಶ್ ಆರೋಪಿಸಿದ್ದಾರೆ. ಈ ಹಿಂದೆಯು ಇಲಾಖೆಯ ಜಾಗೃತದಳ ಅಧಿಕಾರಿಗಳು ಕೆಲ ಅಂಗಡಿಗಳ ಮೇಲೆ ದಾಳಿ ನಡೆಸಿದಾಗಲೂ ಇದು ಬೆಳಕಿಗೆ ಬಂದಿತ್ತು. ಆಗ ಕಠಿಣ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈಗ ಮತ್ತೆ ನಕಲಿ ದಂಧೆ ಶುರುವಾಗಿದೆ. ಅಂಗಡಿ ಮಾಲೀಕರು ರೈತರಿಗೆ ಮೋಸ ಮಾಡುವುದು ಮುಂದುವರಿದಿದೆ, ಈ ಕುರಿತು ಯಾರಿಗಾದರು ದೂರು ನೀಡದಂತೆ ಬೆದರಿಕೆಗಳು ಸಹ ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಿಖರ ದೂರು ನೀಡಿದರೆ ಕ್ರಮ:
ನಾಲ್ಕು ತಿಂಗಳಲ್ಲಿ ಜಿಲ್ಲೆಯಾದ್ಯಂತ 6 ಕಡೆ ದಾಳಿ ಮಾಡಿದ್ದು, ನಕಲಿ ಗೊಬ್ಬರ, ಅನುಮತಿ ಇಲ್ಲದ ಔಷಧ ಮಾರಾಟ ಮಾಡಿರುವುದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ. ರೈತರು, ಸಾರ್ವಜನಿಕರು ನಿಖರವಾಗಿ ದೂರು ನೀಡಿದಲ್ಲಿ ಅಂತಹ ಅಂಗಡಿ ಮೇಲೆ ದಾಳಿ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಕೋಟ್…
ಬೆಳೆಗಳಿಗೆ ಬೇಕಾದ ರಸಗೊಬ್ಬರವನ್ನು ಅಗತ್ಯಕ್ಕೆ ತಕ್ಕಂತೆ ಖರೀದಿ ಮಾಡಲಾಗುತ್ತಿದೆ. ಎರಡು ಬಾರಿ ನನಗೆ ಮೋಸ ಆಗಿದ್ದು, ಆಗಿರುವ ನಷ್ಟಕ್ಕೆ ಯಾರು ಪರಿಹಾರ ಕಟ್ಟಿಕೊಟ್ಟಿಲ್ಲ. ಇಲಾಖೆಯ ಮೇಲಧಿಕಾರಿಗಳಿಗೆ ಹಾಗೂ ಉನ್ನತಮಟ್ಟದ ಅಧಿಕಾರಿಗಳಿಗೆ ಸೂಕ್ತ ತನಿಖೆಗಾಗಿ ದೂರು ನೀಡುತ್ತೇನೆ. -ಟಿ.ಎ.ರಾಜೇಶ್, ರೈತ