

ಬೆಂಗಳೂರು: ಆನ್ಲೈನ್ ಮೂಲಕ ಸ್ನೇಹಿತನಿಗೆ ಕಳುಹಿಸಿದ್ದ ಹಣ ತಲುಪದ ಹಿನ್ನೆಲೆಯಲ್ಲಿ ಅಂತರ್ಜಾಲದಲ್ಲಿ ಸಿಕ್ಕಿದ ಗೂಗಲ್ ಪೇ ಕಸ್ಟಮರ್ ಕೇರ್ ನಂಬರ್ಗೆ ಕರೆ ಮಾಡಿ ವಿಚಾರಿಸಿದ ಖಾಸಗಿ ಕಂಪನಿ ಉದ್ಯೋಗಿಯ ಬ್ಯಾಂಕ್ ಖಾತೆಯಿಂದ ಸೈಬರ್ ಕಳ್ಳರು 99 ಸಾವಿರ ರೂ. ದೋಚಿದ್ದಾರೆ.
ಅರಕೆರೆ ನಿವಾಸಿ ನಾಗಭೂಷಣ್ ವಂಚನೆಗೊಳಗಾದವರು. ಜು.29ರಂದು ಗೂಗಲ್ ಪೇ ಮೂಲಕ ಸ್ನೇಹಿತನಿಗೆ 300 ರೂ. ಕಳುಹಿಸಿದ್ದರು. ಆದರೆ, ಆ ಹಣ ತಲುಪಿರಲಿಲ್ಲ. ವೆಬ್ಸೈಟ್ವೊಂದರಲ್ಲಿ ಗೂಗಲ್ ಪೇ ಕಸ್ಟಮರ್ ಕೇರ್ ಎಂದು ನಮೂದಿಸಿದ್ದ ನಂಬರ್ ಸಿಕ್ಕಿತ್ತು. ಆ ನಂಬರ್ಗೆ ಕರೆ ಮಾಡಿ ಹಣ ತಲುಪಿಲ್ಲ ಎಂದು ಹೇಳಿದ್ದರು. ಕಸ್ಟಮರ್ ಕೇರ್ ಸಿಬ್ಬಂದಿಯಂತೆ ಮಾತನಾಡಿದ ಅಪರಿಚಿತರು, ಹಣ ಹಿಂದಿರುಗಿಸುತ್ತೇವೆ ಎಂದಿದ್ದರು.
ಅವರ ಮಾತನ್ನು ನಂಬಿದ ನಾಗಭೂಷಣ್, ಮೊಬೈಲ್ನಲ್ಲಿ ಕ್ವಿಕ್ ಸಪೋರ್ಟ್ ಆಪ್ ಇನ್ಸ್ಟಾಲ್ ಮಾಡಿಕೊಂಡಿದ್ದರು. ನಂತರ ಕರೆ ಮಾಡಿದ ಅಪರಿಚಿತರು ಬ್ಯಾಂಕ್ ಖಾತೆ ಮಾಹಿತಿ ಪಡೆದುಕೊಂಡಿದ್ದರು. ಇದಾದ ಕೆಲ ಸಮಯದಲ್ಲೇ ನಾಗಭೂಷಣ್ ಖಾತೆಯಿಂದ 99,018 ರೂ. ಕಡಿತ ವಾಗಿದೆ. ಆಗ್ನೇಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.