ಸುಳ್ಳು ಕೇಸ್, ನಾಲ್ವರು ಪೊಲೀಸರು ಅಮಾನತು

crime
Published on

ಬೆಂಗಳೂರು: ಸುಳ್ಳು ದೂರು ದಾಖಲಿಸಿ ಅಮಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದ ಆರೋಪದ ಮೇಲೆ ಬನಶಂಕರಿ ಠಾಣೆ ಪಿಎಸ್‌ಐ ಸೇರಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಬನಶಂಕರಿ ಠಾಣೆ ಪಿಎಸ್‌ಐ ಶ್ರೀಧರ್ ಗುಗ್ರಿ, ಎಎಸ್‌ಐ ಎಸ್.ಕೆ. ರಾಜು, ಕಾನ್‌ಸ್ಟೆಬಲ್‌ಗಳಾದ ಸತೀಶ್ ಬಗಲಿ, ತಿಮ್ಮಪ್ಪ ಪೂಜಾರ ಎಂಬುವರನ್ನು ಅಮಾನತುಗೊಳಿಸಿ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಬಾತ್ಮೀದಾರ ರಾಜನ್ ಮತ್ತು ಚೈತ್ರಾ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕದಿರೇನಹಳ್ಳಿಯ ಇಬ್ಬರ ವಿರುದ್ಧ ಅಫೀಮು ಮಾರುತ್ತಿದ್ದರು ಎಂದು ಸುಳ್ಳು ಮಾಹಿತಿ ನೀಡಿದ್ದರು. ಇದರ ಮೇರೆಗೆ ಪಿಎಸ್‌ಐ ಶ್ರೀಧರ್ ಗುಗ್ರಿ ನೇತೃತ್ವದ ತಂಡ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಬೈಕ್‌ನಲ್ಲಿ ಅಫೀಮು ಜಪ್ತಿ ಮಾಡಿದ್ದರು. ಅಲ್ಲದೆ, ಎನ್‌ಡಿಪಿಎಸ್ ಆರೋಪದಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಈ ಬಗ್ಗೆ ಆರೋಪಿತರ ಪಾಲಕರು, ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು.

ಹೆಚ್ಚಿನ ತನಿಖೆ ಸಲುವಾಗಿ ಸುಬ್ರಹ್ಮಣ್ಯಪುರ ಎಸಿಪಿ ಗಿರೀಶ್ ನೇತೃತ್ವದ ತನಿಖೆಗೆ ಆದೇಶಿಸಿದ್ದರು. ಈ ವೇಳೆ ರಾಜನ್, ಚೈತ್ರಾ ಬಣ್ಣ ಬಯಲಾಗಿತ್ತು. ಎಸಿಪಿ ನೀಡಿದ ವರದಿ ಆಧಾರದ ಮೇಲೆ ಪೊಲೀಸರನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಸುಳ್ಳು ಮಾಹಿತಿ ನೀಡಿದ್ದ ರಾಜನ್, ಚೈತ್ರಾ ವಿರುದ್ಧ ಕೇಸ್ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net