

ನವದೆಹಲಿ: ನಿಮ್ಮ ಡಿವೈಸ್ ಹ್ಯಾಕ್ ಆಗಿದೆ ಎಂದು ಹೇಳಿ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ದೊಡ್ಡ ಜಾಲವನ್ನೇ ಭೇದಿಸಿರುವ ಪೊಲೀಸರು, ನಕಲಿ ಕಾಲ್ ಸೆಂಟರ್ವೊಂದನ್ನೇ ಪತ್ತೆ ಹಚ್ಚಿದ್ದಾರೆ.
ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಫೇಕ್ ಕಾಲ್ ಸೆಂಟರ್ ನಡೆಸುತ್ತಿದ್ದ 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ 20 ಕಂಪ್ಯೂಟರ್ ಸೇರಿ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕೆಲವರಿಗೆ ಪಾಪ್ ಮೆಸೇಜ್ಗಳನ್ನು ಕಳುಹಿಸಿ, ನಿಮ್ಮ ಡಿವೈಸ್ ಹ್ಯಾಕ್ ಆಗಿದೆ ಹಾಗೂ ಮಾಲ್ವೇರ್ಗಳಿಗೆ ಒಳಗಾಗಿದೆ ಎನ್ನುತ್ತಿದ್ದರು. ಮಾತ್ರವಲ್ಲ ಅವರಿಗೆ ಮೈಕ್ರೋಸಾಫ್ಟ್ ಕಡೆಯಿಂದ ತಾಂತ್ರಿಕವಾಗಿ ಸಹಾಯ ಮಾಡುವುದಾಗಿ ಹೇಳಿ ಮೋಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)