

ಶಿವಮೊಗ್ಗ: ಭಾಷೆಯಿಂದಲೇ ಜ್ಞಾನ ಶಾಖೆಗಳು ಬೆಳೆಯುತ್ತವೆ. ಯಾವ ಭಾಷೆಯೂ ಹೇರಿಕೆ ಆಗಬಾರದು. ಪ್ರಭುತ್ವದ ಸಂದರ್ಭದಲ್ಲಿ ಭಾಷೆಯ ಪ್ರಾತಿನಿಧ್ಯ ಬೇರೆಯಾಗಿರುತ್ತದೆ. ಪ್ರಭುತ್ವದ ಭಾಷೆಗಿಂತ ಜನಸಾಮಾನ್ಯರ ಭಾಷೆಗಳು ಉಳಿಯುತ್ತವೆ. ಲ್ಯಾಟಿನ್ ಮತ್ತು ಸಂಸ್ಕೃತ ಭಾಷೆ ಉದಾಹರಣೆಯಾಗಿವೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.
ಕುವೆಂಪು ವಿವಿ, ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾ ಶಾಸ್ತ್ರ ಮತ್ತು ಶಿಕ್ಷಣ ವಿಭಾಗದ ಸಂಯುಕ್ತಾಶ್ರಯದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಬಹುಭಾಷಿಕತೆ, ಆಧುನಿಕತೆ ಮತ್ತು ಶಿಕ್ಷಣದ ಹೊಸ ಸವಾಲುಗಳು ಕುರಿತ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕವನ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಭಾಷೆಗಳಲ್ಲಿ ಜ್ಞಾನ ದೃಷ್ಟಿಯನ್ನು ಸಮೃದ್ಧಿಗೊಳಿಸುವಲ್ಲಿ ನಾವು ವಿಫಲರಾಗಿದ್ದೇವೆ. ಸಂಸ್ಕೃತ ಭಾಷೆ ಕನ್ನಡದ ಜತೆ ಸ್ನೇಹ ಬೆಳೆಸಿತ್ತು. ಈಗ ಆ ಜಾಗದಲ್ಲಿ ಇಂಗ್ಲಿಷ್ ಕುಳಿತುಕೊಂಡಿದೆ. ಒಂದು ಮಗು ಕಲಿಯುವುದು ಮಾತೃಭಾಷೆಯಾದರೂ ಬಹುಭಾಷಾ ವಾತಾವರಣದಲ್ಲಿ ಬೆಳೆಸುವುದರಿಂದ ಮಗುವಿನ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ ಎಂದು ತಿಳಿಸಿದರು.
ಒಂದು ಭಾಷೆಗೆ ಮಾತ್ರ ಬಲವಂತದ ಸ್ಥಾನ ನೀಡುವುದು ಸರಿಯಲ್ಲ. ಕರ್ನಾಟಕ ಬಹುಭಾಷೆಗಳ ಮಿನಿ ಭಾರತವಾಗಿದೆ. ಶೇ. 55ರಷ್ಟು ಕನ್ನಡಿಗರಿದ್ದು, ಉಳಿದವರು ಶೇ.45ರಷ್ಟಿದ್ದಾರೆ. ಕನ್ನಡ ಕೂಡ ಹೇರಿಕೆ ಭಾಷೆಯಾಗಬಾರದು. ಇಂಗ್ಲಿಷ್ ಮಾಧ್ಯಮಗಳ ಶಾಲೆಗಳನ್ನು ಸರ್ಕಾರ ತೆರೆದಿದೆ. ಆದರೆ ಅವು ಸಂಪೂರ್ಣ ವಿಫಲವಾಗಿವೆ. ಒಟ್ಟಾರೆ ಭಾಷಾ ನೀತಿಯಲ್ಲಿ ತೊಡಕುಗಳಿವೆ ಎಂದರು.
ಭಾಷಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಮೇಟಿ ಮಲ್ಲಿಕಾರ್ಜುನ ಮಾತನಾಡಿ, ಬಹುಭಾಷಿಕತೆ ಎಂಬುದು ಸಹಜ ವಿದ್ಯಮಾನ. ಅದನ್ನು ಪೋಷಿಸುವಲ್ಲಿ ನಾವು ಸೋಲುತ್ತಿದ್ದೇವೆ. ಭಾಷಾ ನೀತಿ, ತ್ರಿಭಾಷಾ ಸೂತ್ರದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಶಿಕ್ಷಣದ ಮೇಲೆ ಆಗುವ ಅಪಾಯಗಳ ಬಗ್ಗೆ ನಾವು ಯೋಚಿಸುತ್ತಿಲ್ಲ ಎಂದು ಹೇಳಿದರು.
ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ.ಶ್ರೀಪಾಲ್, ಪ್ರಾಚಾರ್ಯ ಪ್ರೊ.ಸೈಯ್ಯದ್ ಸನಾವುಲ್ಲಾ, ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಎಚ್.ಪಿ.ಮಂಜುನಾಥ್ ಇದ್ದರು.