ಬೆಂಗಳೂರು: ಜಲಸಂಪನ್ಮೂಲ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌ಎಲ್) ಹಾಗೂ ಕೃಷ್ಣಾಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಪ್ರಾದೇಶಿಕ ಕಚೇರಿಗಳನ್ನು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಭಾಗಕ್ಕೆ ಸ್ಥಳಾಂತರಿಸಲು ವಿರೋಧಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರವನ್ನು ಉತ್ತರ ಕರ್ನಾಟಕ ರೈತ ಅಭಿವೃದ್ಧಿ ಸಂಘ ಸೇರಿ ಸಾವಿರಾರು ರೈತರು ಒತ್ತಾಯಿಸಿದ್ದಾರೆ.
ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಆ ಭಾಗದ ಜನರಿಗೆ ಆಡಳಿತ ಕಾರ್ಯಗಳು ಹತ್ತಿರವಾಗಲು ಕೃಷ್ಣಾಭಾಗ್ಯ ಜಲ ನಿಗಮದ ಕಚೇರಿಯನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿಗೆ ಹಾಗೂ ಕರ್ನಾಟಕ ನೀರಾವರಿ ನಿಗಮದ ಪ್ರಾದೇಶಿಕ ಕಚೇರಿಯನ್ನು ದಾವಣಗೆರೆಗೆ ಸ್ಥಳಾಂತರಿಸಲು 8 ವರ್ಷಗಳಿಂದ ಆದೇಶ ಹೊರಡಿಸಿದ್ದರೂ ಸರ್ಕಾರದ ನಿಯಮವನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ. ಕೃಷ್ಣಾಭಾಗ್ಯ ಜಲಾಶಯ ನಿಗಮವನ್ನು ಅಲಮಟ್ಟಿಗೆ ಸ್ಥಳಾಂತರವಾಗಿದೆ ಎಂದು ಹೈಕೋರ್ಟ್‌ಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಕೆಲ ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕೋರ್ಟ್ ಮತ್ತು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಾ ಬರುತ್ತಿದ್ದಾರೆ. ಹಲವು ವರ್ಷಗಳಿಂದ ನಿಗಮದಲ್ಲೇ ಠಿಕಾಣಿ ಹೂಡಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಸಂಘದ ಅಧ್ಯಕ್ಷ ಯಾಸಿನ್ ಜವಳಿ ಆಗ್ರಹಿಸಿದ್ದಾರೆ.
ಪ್ರತಿ ತಿಂಗಳು ಎರಡು ನಿಗಮಗಳ ಕಚೇರಿಗಳ ಬಾಡಿಗೆ ಮೊತ್ತವೂ ಲಕ್ಷಾಂತರ ರೂ. ಇದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಬುಧವಾರ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಮುಖ್ಯ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಅಧಿಕಾರಿಗಳನ್ನು ತರಾಟೆ ತಗೆದುಕೊಂಡಿದ್ದಾರೆ. ಕೂಡಲೇ ಕಚೇರಿಗಳನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಕಚೇರಿಗಳ ಸ್ಥಳಾಂತರ ಮಾಡದಿದ್ದರೆ ಮುಂದಿನ ದಿನಗಳ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ರೈತರು ಹೇಳಿದ್ದಾರೆ.
ನಮ್ಮ ಭಾಗಕ್ಕೆ ನೀರಾವರಿ ನಿಗಮ ಕಚೇರಿಗಳು ಸ್ಥಳಾಂತರವಾದರೆ ರೈತರಿಗೆ ಅನುಕೂಲವಾಗಲಿದೆ. ಈ ಎರಡು ನಿಗಮಗಳ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸಲು ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಜಲಸಂಪನ್ಮೂಲ ಇಲಾಖೆ, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಸ್ಥಳಾಂತರಕ್ಕೆ ಕೈಗೊಂಡ ಕ್ರಮದ ವರದಿಯನ್ನು ಕೂಡಲೇ ಸಲ್ಲಿಸುವಂತೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ. ಆದರೂ, ಅಧಿಕಾರಿಗಳು ವಿಳಂಬ ಧೋರಣೆ ಅನುಸುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.