

ನವದೆಹಲಿ: ದೇಶದ ಎಲ್ಲಾ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂಬ ವಿಚಾರ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವಿಚಾರ ಹಿಂದಿ ಪತ್ರಿಕೆಯೊಂದರಲ್ಲಿ ವರದಿಯೂ ಆಗಿತ್ತು. ಅಲ್ಲದೆ ವರದಿಯ ಸ್ಕ್ರೀನ್ ಶಾಟ್ ಸಹ ಜಾಲತಾಣದಲ್ಲಿ ಸದ್ದು ಮಾಡಿತ್ತು. ಸರ್ಕಾರಿ ಶಾಲೆಗಳು ಖಾಸಗಿ ಪಾಲಾಗಲಿದೆ ಎಂದು ತಿಳಿದ ಅನೇಕರು ಆಘಾತಕ್ಕೂ ಒಳಗಾಗಿದ್ದರು.
ಸುದ್ದಿ ವೈರಲ್ ಆಗಿ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಈ ರೀತಿಯಾದ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ. ಇದೊಂದು ನಕಲಿ ಸುದ್ದಿ ಎಂದು ಸರ್ಕಾರದ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (ಪಿಐಬಿ) ಫ್ಯಾಕ್ಟ್ಚೆಕ್ ನೀಡಿದೆ.
ದೇಶದ ಸರ್ಕಾರಿ ಶಾಲೆಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲಿದೆ ಎಂದು ಕೆಲವು ಮಾಧ್ಯಮಗಳ ವರದಿ ಮಾಡಿವೆ. ಯಾವುದೇ ಕಾರಣಕ್ಕೂ ಇದನ್ನು ನಂಬಬೇಡಿ. ಇದು ಸತ್ಯಕ್ಕೆ ದೂರವಾದದ್ದು, ಸರ್ಕಾರಿ ಈ ರೀತಿಯ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪಿಐಬಿ ಟ್ವೀಟ್ ಮಾಡಿದೆ.
ಇಂತಹ ಮಾಹಿತಿಗಳನ್ನು ನಂಬದಿರಿ. ನಂಬಿಕಾರ್ಹ ಮೂಲಗಳ ಮಾಹಿತಿಯನ್ನು ಮಾತ್ರ ನಂಬಿ ಎಂದು ಪಿಐಬಿ ಎಚ್ಚರಿಸಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳು ಹರಿದಾಡುವುದು ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಕುರಿತಾದ ನಕಲಿ ಸುದ್ದಿಗಳಿಗೆ ಸ್ಪಷ್ಟನೆ ನೀಡಲು ಪಿಐಬಿ 2019ರ ಡಿಸೆಂಬರ್ನಲ್ಲಿ ಫ್ಯಾಕ್ಟ್ಚೆಕ್ ಕಾರ್ಯವನ್ನು ಆರಂಭಿಸಿದೆ. (ಏಜೆನ್ಸೀಸ್)