VIDEO| ಈ ಟಿಕ್​ಟಾಕ್​ ಸ್ಟಾರ್​ ಎನ್​ಆರ್​ಸಿ ಪ್ರತಿಭಟನೆ ವೇಳೆ ಗಾಯಗೊಂಡರೇ?: ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಗಿದ್ದೇನು?

Tik Tok 9 jan 20
Published on

ನವದೆಹಲಿ: ಗಾಯಗೊಂಡ ಸ್ನೇಹಿತೆಗೆ ನಡೆಯಲು ಸಹಾಯ ಮಾಡುತ್ತ ಆಕೆಯನ್ನು ನಗಿಸಲು ಯತ್ನಿಸುತ್ತಿರುವ ಯುವತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜೆಎನ್​​ಯುನಲ್ಲಿ ನಡೆದ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯಿದೆ ವಿರೋಧಿ ಪ್ರತಿಭಟನೆಯಲ್ಲಿ ಗಾಯಗೊಂಡ ಯುವತಿ ಎಂದು ತಪ್ಪಾಗಿ ಬಿಂಬಿಸಲಾಗಿದೆ. ಆದರೆ, ಇದರ ನಿಜಾಂಶ ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಗಿದೆ.

ವೈರಲ್​ ವಿಡಿಯೋಗೆ ಹಿಂದಿ ಭಾಷೆಯಲ್ಲಿ ಅಡಿ ಬರಹ ನೀಡಲಾಗಿದ್ದು ಅದನ್ನು ತರ್ಜುಮೆ ಮಾಡಿದಾಗ, ಎನ್​ಆರ್​ಸಿ ವಿರೋಧಿಸಿ ಜೆಎನ್​ಯುನಲ್ಲಿ ನಡೆದ ಪ್ರತಿಭಟನೆ ವೇಳೆ ಗಾಯಗೊಂಡ ತನ್ನ ಸ್ನೇಹಿತೆಯನ್ನು ಚಿಯರ್​ ಅಪ್​ ಮಾಡಲು ಈ ಯುವತಿ ಯತ್ನಿಸುತ್ತಿದ್ದಾಳೆ. ಸ್ನೇಹ ಹೇಗಿರಬೇಕೆಂಬುದಕ್ಕೆ ಇದು ಸಾಕ್ಷಿಯಾಗಿದೆ. ಬಹಳ ಗಂಭೀರ ಸ್ಥಿತಿಯಲ್ಲಿದ್ದರೂ ಪರಸ್ಪರ ಪ್ರೋತ್ಸಾಹಿಸಿಕೊಳ್ಳುತ್ತಿದ್ದಾರೆ ಎಂದು ಬರೆಯಲಾಗಿದೆ.

ವಿಡಿಯೋ ಕುರಿತು ಹೇಳಿರುವ ಮಾತು ಎಷ್ಟು ನಿಜವೆಂದು ತಿಳಿಯಲು ಇಂಡಿಯಾ ಟುಡೆ ಫ್ಯಾಕ್ಟ್​ಚೆಕ್ ನಡೆಸಿದಾಗ ವಿಡಿಯೋದ ಅಸಲೀಯತ್ತು ಬಯಲಾಗಿದೆ. ವಿಡಿಯೋದಲ್ಲಿ ಗಾಯಗೊಂಡ ಯುವತಿ ಟಿಕ್​ಟಿಕ್​ ಸ್ಟಾರ್​ ಜರಾ ಖಾನ್ ಎಂದು ತಿಳಿದುಬಂದಿದೆ. ಕಾರು ಅಪಘಾತದಲ್ಲಿ ಆಕೆ ಗಾಯಗೊಂಡಿದ್ದಳು. ಆದರೆ, ಫೇಸ್​ಬುಕ್​ ಬಳಕೆದಾರರೊಬ್ಬರು ವಿಡಿಯೋ ಶೇರ್​ ಮಾಡಿ ತಪ್ಪಾಗಿ ಬರೆದುಕೊಂಡಿದ್ದಾರೆ. ಅಲ್ಲದೆ, ವಿಡಿಯೋವನ್ನು ಹಲವಾರು ಮಂದಿ ವೀಕ್ಷಣೆ ಮಾಡಿದ್ದು, ಶೇರ್​ ಕೂಡ ಮಾಡಿಕೊಂಡಿದ್ದಾರೆ.

ಗೂಗಲ್​ ರಿವರ್ಸ್​ ಸರ್ಚ್​ ಮೂಲಕ ನೋಡಿದಾಗ ವಿಡಿಯೋ ಟಿಕ್​ಟಾಕ್​ ಆ್ಯಪ್​ನಲ್ಲಿ ಹರಿದಾಡಿರುವುದು ಪತ್ತೆಯಾಗಿದೆ. ಶಿವಾನಿ ಸರ್ಕಾರ್​4 ಹೆಸರಿನ ಟಿಕ್​ಟಾಕ್​ ಖಾತೆಯಲ್ಲಿ ಜರಾ ಖಾನ್ ಡಿಸ್​​ಪ್ಲೇ ಹೆಸರಿನಲ್ಲಿ ವಿಡಿಯೋ ಹರಿದಾಡಿದೆ. ಕಳೆದ ಡಿಸೆಂಬರ್​ 22ರಂದು ಶಿವಾನಿ ಈ ವಿಡಿಯೋ ಶೇರ್​ ಮಾಡಿದ್ದಾರೆ. ಅಲ್ಲದೆ, ಹಲವರು ಏನಾಯಿತು ಎಂದೂ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಶಿವಾನಿ ಅಪಘಾತಕ್ಕೀಡಾಗಿದ್ದು, ಸದ್ಯ ಆಕೆ ಆರೋಗ್ಯವಾಗಿದ್ದಾಳೆ ಎಂದು ಉತ್ತರಿಸಿದ್ದಾರೆ.

ಅಂದಹಾಗೆ ಜರಾ ಖಾನ್​ ಟಿಕ್​ಟಾಕ್​ನಲ್ಲಿ 52,400 ಹಿಂಬಾಲಕರನ್ನು ಹೊಂದಿದ್ದಾರೆ. ಅಲ್ಲದೆ, ಟಿಕ್​ಟಾಕ್​ನಲ್ಲೂ ವೈರಲ್ ಆಗಿರುವ ವಿಡಿಯೋಗೆ ಸುಮಾರು 8 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಬಂದಿವೆ.​ ಅಲ್ಲದೆ, ಘಟನೆ ಕುರಿತು ತಿಳಿಯಲು ಜರಾಳನ್ನು ಕೂಡ ಇನ್​ಸ್ಟಾಗ್ರಾಂ ಮೂಲಕ ಇಂಡಿಯಾ ಟುಡೇ ಸಂಪರ್ಕಿಸಿದ್ದು, ಪ್ರತಿಕ್ರಿಯೆ ನೀಡಿದ ಬಳಿಕ ಅಪ್​ಡೇಟ್​ ಮಾಡುವುದಾಗಿ ಹೇಳಿದೆ. ಹೀಗಾಗಿ ಎನ್​ಆರ್​ಸಿಗೂ ಈ ವಿಡಿಯೋ ಸಂಬಂಧವಿಲ್ಲ ಎಂದು ಇಂಡಿಯಾ ಟುಡೆ ಫ್ಯಾಕ್ಟ್​ಚೆಕ್​ ಬಹಿರಂಗಪಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net