ಕಾಲುವೆ ಅಗೆಯುವಾಗ ಕಾರ್ಮಿಕನಿಗೆ ಒಲಿಯಿತಾ ನಿಧಿ? ವೈರಲ್​ ಸುದ್ದಿ ಹಿಂದಿನ ಸತ್ಯಾಂಶ ಹೀಗಿದೆ...

Treasure
Published on

ನವದೆಹಲಿ: ಹೊಲಸು ಮಿಶ್ರಿತ ಬದಿಯಲ್ಲಿ ಮುರಿದು ಬಿದ್ದಿರುವ ಕಂಟೈನರ್​ನಲ್ಲಿ ಚಿನ್ನದ ನಾಣ್ಯಗಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ವುಲಾರ್​ ಕೆರೆ ಬಳಿ ಕಾಲುವೆಯನ್ನು ಅಗೆಯುವಾಗ ಕಾರ್ಮಿಕನಿಗೆ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ಫೋಟೋ ಕುರಿತು ಹೇಳಲಾಗಿದೆ.

ಫೇಸ್​ಬುಕ್​ ಬಳಕೆದಾರರೊಬ್ಬರ ಈ ಚಿತ್ರವನ್ನು ಶೇರ್​ ಮಾಡಿಕೊಂಡಿದ್ದು, ಬಾರಾಮುಲ್ಲ ಏರಿಯಾದ ಕಾರ್ಮಿಕನೊಬ್ಬನಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಪತ್ತೆಯಾಗಿವೆ. ಫೆ. 13ರ ಶನಿವಾರ ಸುಮಾರು 30 ಕಾರ್ಮಿಕರು ಯೋಜನೆಯೊಂದರ ಅಡಿಯಲ್ಲಿ ವುಲಾರ್​ ಕೆರೆ ಬಳಿ ಕಾಲುವೆ ಅಗೆಯುವಾದ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ನೆಟ್ಟಿಗ ಬರೆದುಕೊಂಡಿದ್ದಾರೆ.

ಆದರೆ, ಇಂಡಿಯಾ ಟುಡೆ ಆ್ಯಂಟಿ ಫೇಕ್​ನ್ಯೂಸ್​ ವಾರ್​ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲಾಗಿದ್ದು, ನಾಣ್ಯಗಳಿರುವ ಫೋಟೋ ಭಾರತದಲ್ಲ, ಬದಲಾಗಿ ಇಟಾಲಿಯನ್​ ಪಟ್ಟಣ ಕೊಮೊಗೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ಹಳೆಯ ಚಿತ್ರಮಂದಿರದ ನವೀಕರಣಗೊಳಿಸುವಾಗ ಕಾರ್ಮಿಕರಿಗೆ ನಾಣ್ಯಗಳು ಪತ್ತೆಯಾಗಿದ್ದು, ಅವುಗಳು ಹಳೆಯ ಸಾಮ್ರಾಜ್ಯಶಾಹಿ ಯುಗಕ್ಕೆ ಸಂಬಂಧಿಸಿದ್ದಾಗಿವೆ.

ಆದರೆ, ಸದ್ಯ ಫೇಸ್​ಬುಕ್​ನಲ್ಲಿ ಭಾರತದ್ದಲ್ಲಿ ಪತ್ತೆಯಾಗಿವೆ ಎಂದು ವೈರಲ್​ ಮಾಡಲಾಗಿದೆ. ವೈರಲ್​ ಫೋಟೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಇಂಜಿನಲ್ಲಿ ಹುಡುಕಿದಾಗ "ದಿ ಐರೀಸ್​ ಸನ್​" ವೆಬ್​ಸೈಟ್​ನಲ್ಲಿ 2018ರ ಸೆಪ್ಟೆಂಬರ್​ 10ರಂದು ನಾಣ್ಯಕ್ಕೆ ಸಂಬಂಧಿಸಿದ ಸುದ್ದಿ ಪತ್ತೆಯಾಗಿದೆ.

ವರದಿಯ ಪ್ರಕಾರ ನಾಣ್ಯಗಳು 1500 ವರ್ಷ ಹಳೆಯದ್ದು ಎನ್ನಲಾಗಿದೆ. ಅವುಗಳನ್ನು ಚಿತಾಭಸ್ಮ ತುಂಬಿಡುವುದರಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಇಟಲಿಯಲ್ಲಿರುವ ಚಿತ್ರಮಂದಿರವನ್ನು ನವೀಕರಣಗೊಳಿಸುವಾಗ ಕಾರ್ಮಿಕರಿಗೆ ನಾಣ್ಯಗಳು ಪತ್ತೆಯಾಗಿವೆ. ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಇಟಾಲಿಯನ್​ ಪ್ರವಾಸೋದ್ಯಮ ಇಲಾಖೆ ಸಹ 2018ರ ಸೆ. 7ರಂದು ಶೇರ್​ ಮಾಡಿಕೊಂಡಿದೆ.

ಆದರೆ, ನಾಣ್ಯಗಳು ಜಮ್ಮು ಮತ್ತು ಕಾಶ್ಮೀರದಲ್ಲೇ ಪತ್ತೆಯಾದವು ಎಂಬುದನ್ನು ಸಾಬೀತು ಮಾಡುವ ಯಾವುದೇ ವರದಿಯಾಗಲಿ, ದಾಖಲೆಗಳಾಗಲಿ ಪತ್ತೆಯಾಗಲಿಲ್ಲ. ಹೀಗಾಗಿ ಚಿನ್ನದ ನಾಣ್ಯಗಳ ಕುರಿತು ಪ್ರಸ್ತತು ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಇಂಡಿಯಾ ಟುಡೆ ನಡೆಸಿದ ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net