

ನವದೆಹಲಿ: ವಯಸ್ಸಾದ ವ್ಯಕ್ತಿಯೊಬ್ಬರು ಯುವತಿಯೊಬ್ಬಳ ನಿತಂಬ ಸ್ಪರ್ಶಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿರುವ ವ್ಯಕ್ತಿ ಅಜರ್ಬೈಜಾನ್ ಅಧ್ಯಕ್ಷರು, ವಿಡಿಯೋ ಚಾಟ್ ವೇಳೆ ಕ್ಯಾಮೆರಾ ಆಫ್ ಮಾಡುವುದನ್ನು ಮರೆತು ಎಡವಟ್ಟು ಮಾಡಿಕೊಂಡಿದ್ದಾರೆಂದು ವೈರಲ್ ವಿಡಿಯೋ ಕುರಿತು ಹೇಳಲಾಗಿದೆ.
ವಿಡಿಯೋದಲ್ಲಿ ಏನಿದೆ?: ವಯಸ್ಸಾದ ವ್ಯಕ್ತಿ ಕ್ಯಾಮೆರಾ ಮುಂದೆ ಮುಖ ಮಾಡಿರುತ್ತಾರೆ. ಅದೇ ಸಮಯದಲ್ಲಿ ಯುವತಿಯೊಬ್ಬಳು ಅವರಿದ್ದ ಕೋಣೆಯನ್ನು ಪ್ರವೇಶಿಸುತ್ತಾಳೆ. ಏನೋ ತೆಗೆದುಕೊಳ್ಳಲು ನಡು ಬಾಗಿಸಿ ಟೇಬಲ್ನಲ್ಲಿ ಹುಡುಕಾಡುವಾಗ ಹಿಂದಿನಿಂದ ಹಿರಿಯ ವ್ಯಕ್ತಿ ಆಕೆಯ ನಿತಂಬಗಳನ್ನು ಸ್ಪರ್ಶಿಸುತ್ತಾರೆ. ಅನೇಕ ಫೇಸ್ಬುಕ್ ಬಳಕೆದಾರರು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಜೂಮ್ ಮೀಟಿಂಗ್ನಿಂದ ಹೊರಹೋಗಲು ಅಜರ್ಬೈಜಾನ್ ಅಧ್ಯಕ್ಷರು ಮರೆತಿದ್ದಾರೆ ಎಂದು ಅಡಿಬರಹ ಬರೆದು ವೈರಲ್ ಮಾಡಿದ್ದಾರೆ.
ಇನ್ನು ಕೆಲವರು ವಿಡಿಯೋದಲ್ಲಿರುವ ವ್ಯಕ್ತಿ ಅಜರ್ಬೈಜಾನ್ನ ಪ್ರಧಾನ ಮಂತ್ರಿಗಳು ಎಂದು ವಾದಿಸಿದ್ದಾರೆ. ಆದರೆ, ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ವಿಡಿಯೋದ ಅಸಲಿಯತ್ತು ಬಯಲಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿ ಅಜರ್ಬೈಜಾನ್ನ ಅಧ್ಯಕ್ಷರಾಗಲಿ ಅಥವಾ ಪ್ರಧಾನ ಮಂತ್ರಿಯಾಗಲಿ ಅಲ್ಲ. ಆತ ಅಜರ್ಬೈಜಾನ್ನ ಮಾಜಿ ಸಂಸದ ಮತ್ತು ವಿಶ್ವವಿದ್ಯಾಲಯ ಪ್ರಾಧ್ಯಪಕ ಹುಸೆಯಂಬಾಲಾ ಮಿರಾಲಮೊವ್. ತಪ್ಪು ಮಾಡಿದ್ದಕ್ಕೆ ಈಗಾಗಲೇ ಆತ ವಿಶ್ವವಿದ್ಯಾಲಯ ಮತ್ತು ನ್ಯೂ ಅಜರ್ಬೈಜಾನ್ ಪಾರ್ಟಿ (ವೈಎಪಿ) ಯಿಂದ ವಜಾ ಮಾಡಲಾಗಿದೆ. ಕಳೆದ ತಿಂಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಲೀಕ್ ಆದ ಬಳಿಕ ಕ್ರಮ ಜರುಗಿಸಲಾಗಿದೆ.
ವೈರಲ್ ವಿಡಿಯೋ ಸಂಬಂಧಿಸಿದ ಕೀ ವರ್ಡ್ಸ್ ಸಹಾಯದಿಂದ ಹುಡುಕಾಡಿದಾಗ ಅನೇಕ ಮಾಧ್ಯಮ ವರದಿಗಳು ಪತ್ತೆಯಾಗಿವೆ. ಅದರ ಪ್ರಕಾರ ಹುಸೆಯಂಬಾಲಾ ಮಿರಾಲಮೊವ್ ನ ಮಾಜಿ ಸಂಸದ ಮತ್ತು ವಿಶ್ವವಿದ್ಯಾಲಯ ಪ್ರಾಧ್ಯಪಕರಾಗಿದ್ದಾರೆ.
ವಿಶ್ವವಿದ್ಯಾಲಯದ ವಿಡಿಯೋ ಕಾನ್ಫರೆನ್ಸ್ ವೇಳೆ ಘಟನೆ ನಡೆಯಿತು. ನನ್ನನ್ನು ಬೆದರಿಸಲು ಕೆಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ಹುಸೆಯಂಬಾಲಾ ಮಿರಾಲಮೊವ್ ಮಾಹಿತಿ ನೀಡಿದ್ದಾರೆ.
ಅಜೆರ್ಬೈಜಾನ್ನ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಮತ್ತು ಪ್ರಧಾನಿ ಅಲಿ ಅಸಾದೋವ್, ಮಹಿಳೆಯೊಬ್ಬರನ್ನು ಒಳಗೊಂಡ ವೀಡಿಯೊ ಸೋರಿಕೆ ವಿವಾದದಲ್ಲಿ ಸಿಲುಕಿರುವ ಬಗ್ಗೆ ಇತ್ತೀಚಿನ ಯಾವುದೇ ಮಾಧ್ಯಮ ವರದಿಗಳಿಲ್ಲ. ಆದ್ದರಿಂದ ವೈರಲ್ ವೀಡಿಯೊದಲ್ಲಿ ಮಹಿಳೆ ಸ್ಪರ್ಶಿಸುವ ವ್ಯಕ್ತಿ ಅಜೆರ್ಬೈಜಾನ್ ಅಧ್ಯಕ್ಷ ಎಂದು ವೈರಲ್ ಆಗಿರುವ ಫೇಸ್ಬುಕ್ ಪೋಸ್ಟ್ಗಳು ತಪ್ಪುದಾರಿಗೆಳೆಯುತ್ತಿವೆ. ಆ ವ್ಯಕ್ತಿ ದೇಶದ ಮಾಜಿ ಸಂಸದ ಎಂಬುದು ಫ್ಯಾಕ್ಟ್ಚೆಕ್ನಿಂದ ತಿಳಿದುಬಂದಿದೆ. (ಏಜೆನ್ಸೀಸ್)