

ನವದೆಹಲಿ: ಚೆನ್ನೈ ಮಹಿಳೆಯನ್ನು ಆಕೆಯ ಬಾಂಗ್ಲದೇಶಿ ಪ್ರಿಯಕರ ಅಪಹರಿಸಿ ಲಂಡನ್‌ನಲ್ಲಿ ಬಲವಂತವಾಗಿ ಮತಾಂತರ ಮಾಡಿಸಿದ್ದಾನೆಂದು ಇತ್ತೀಚೆಗೆ ವರದಿಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಲವ್ ಜಿಹಾದ್ ಚರ್ಚೆ ಜೋರಾಗಿದೆ.
ಮುಖ ಸುಟ್ಟುಹೋದ ಹಾಗೂ ಮುಖ ಕಾಣದಂತೆ ಬ್ಲರ್ ಮಾಡಿರುವ ಮಹಿಳೆಯ ಒಂದು ಫೋಟೋ ಮತ್ತು ಇನ್ನೊಂದರಲ್ಲಿ ಸುಂದರ ಮಹಿಳೆ ಇರುವ ಎರಡು ಚಿತ್ರಗಳ ಫೋಟೋ ಕೊಲ್ಯಾಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿಂದು ಯುವತಿ ಮೇಲೆ ಆಕೆಯ ಮುಸ್ಲಿಂ ಲವರ್ ಆಸಿಡ್ ದಾಳಿ ಮಾಡಿದ್ದಾನೆಂಬ ಸಂದೇಶವನ್ನು ಪರೋಕ್ಷವಾಗಿ ಸಾರಾಲಾಗಿದೆ.
ಇನ್ಸ್ಟಾಗ್ರಾಂ ಬಳಕೆದಾರರೊಬ್ಬರು ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹಿಂದಿ ಭಾಷೆಯಲ್ಲಿ ಅಡಿ ಬರಹ ಬರೆಯಲಾಗಿದ್ದು, ಅದರ ಸಾರಾಂಶ ಹೀಗಿದೆ. ಈಕೆಯ ಪ್ರಿಯಕರ ಇತರರಂತೆ ಅಲ್ಲ. ಹಿಂದು ಸಹೋದರಿಯರೇ ಈಗಲೂ ಕಾಲ ಮಿಂಚಿಲ್ಲ. ಇಂತಹ ಜನರಿಂದ ದೂರವಿರಿ ಎಂದು ಎಚ್ಚರಿಸಿ, ಕೊನೆಯಲ್ಲಿ ಜೈ ಶ್ರೀರಾಮ್ ಘೋಷಣೆ ಬರೆಯಲಾಗಿದೆ. ಸಾಕಷ್ಟು ನೆಟ್ಟಿಗರು ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಫ್ಯಾಕ್ಟ್ಚೆಕ್ನಲ್ಲಿ ಸತ್ಯಾಂಶ ಬಯಲು
ವೈರಲ್ ಫೋಟೋ ಕುರಿತಾದ ನಿಜಾಂಶ ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ಫ್ಯಾಕ್ಟ್ಚೆಕ್ ನಡೆಸಿದ್ದು, ಫೋಟೋದಲ್ಲಿರುವ ಯುವತಿ ಹಿಂದು ಅಲ್ಲ. ಅವಳು ಮುಸ್ಲಿಂ ಯುವತಿ. 2017ರಲ್ಲಿ ಲಂಡನ್‌ನಲ್ಲಿ ಈಕೆಯ ಮೇಲೆ ವ್ಯಕ್ತಿಯೊಬ್ಬನಿಂದ ಹಲ್ಲೆ ನಡೆದಿತ್ತು.
ಆಸಿಡ್ ದಾಳಿ ಪ್ರಕರಣದಲ್ಲಿ ಜಾನ್ 16 ವರ್ಷಗಳ ಕಠಿಣ ಶಿಕ್ಷೆ ಗುರಿಯಾಗಿದ್ದಾರೆಂದು 2018ರಲ್ಲಿ ಬಿಬಿಸಿ ವರದಿ ಮಾಡಿದೆ. ಸಾಕಷ್ಟು ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಸುದ್ದಿಯನ್ನು ಬಿತ್ತರಿಸಿವೆ. ಲಂಡನ್‌ನಲ್ಲಿ ಇಸ್ಲಮೋಫೋಬಿಯಾ ಬೆಳೆಯುತ್ತಿರುವುದರ ಪರಿಣಾಮವೇ ನಮ್ಮ ಮೇಲಿನ ದಾಳಿಗೆ ಕಾರಣವೆಂದು ರೇಷ್ಮಾ ಅವರ ಸೋದರಸಂಬಂಧಿ ಜಮೀಲ್ ನೀಡಿದ ಹೇಳಿಕೆ ಇಂಡಿಪೆಂಡೆಂಟ್ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ.
ಹೀಗಾಗಿ ಸದ್ಯ ವೈರಲ್ ಆಗಿರುವ ಫೋಟೋಗೂ ಲವ್ ಜಿಹಾದ್ಗೂ ಸಂಬಂಧವಿಲ್ಲ. ತಪ್ಪು ಮಾಹಿತಿ ಹರಡುವ ಉದ್ದೇಶದಿಂದ ಇದನ್ನು ಹರಿಬಿಡಲಾಗಿದೆ ಎಂಬುದು ಫ್ಯಾಕ್ಟ್ಚೆಕ್ನಲ್ಲಿ ಬಹಿರಂಗವಾಗಿದೆ. (ಏಜೆನ್ಸೀಸ್)