

ನವದೆಹಲಿ: ಪುಲ್ವಾಮಾ ದಾಳಿ ಪ್ರಕರಣದಲ್ಲಿ ಬಂಧಿಸಲಾಗಿರುವ ಏಕೈಕ ಮಹಿಳೆ ಇನ್ಶಾ ಜಾನ್ (23), ಜೈಷ್-ಎ- ಮೊಹಮದ್ ಭಯೋತ್ಪಾದಕರಿಗೆ ನೆರವಾಗಿದ್ದಳು ಎಂದು ಎನ್ಐಎ ಕೋರ್ಟ್ಗೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಿದೆ.
ದಾಳಿಯ ಪ್ರಧಾನ ಸಂಚುಕೋರ ಮಹಮದ್ ಉಮರ್ ಫಾರೂಕ್ ಜತೆ ಆಕೆ ಫೋನ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕ ಹೊಂದಿದ್ದಳು. ಇವರಿಬ್ಬರ ಮಧ್ಯೆ ನಡೆದ ಸಂಭಾಷಣೆಗಳ ಧ್ವನಿಮುದ್ರಿಕೆಯನ್ನು ಆಲಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ದಾಳಿಯ ಪ್ರಮುಖ ಆರೋಪಿಯಾಗಿದ್ದ ಮಹಮದ್ ಉಮರ್ ಫಾರೂಕ್ನ ಪಾಕಿಸ್ತಾನದ ಮೂರು ಬ್ಯಾಂಕ್ ಖಾತೆಗಳಿಗೆ 10 ಲಕ್ಷ ರೂಪಾಯಿ (ಪಾಕಿಸ್ತಾನಿ ಕರೆನ್ಸಿ) ಜಮಾ ಆಗಿತ್ತು. ಈ ಹಣ ದಾಳಿಗೂ ಮುಂಚೆಯೇ ಸಂದಾಯವಾಗಿತ್ತು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಜೈಷ್-ಎ-ಮೊಹಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸೇರಿ 19 ಜನರ ವಿರುದ್ಧ ಎನ್ಐಎ ಆರೋಪಪಟ್ಟಿ ಸಲ್ಲಿಸಿದೆ. ಮಸೂದ್ ಅಜರ್ನ ಸೋದರ ಸಂಬಂಧಿಯಾದ ಫಾರೂಕ್, 2019ರ ಮಾರ್ಚ್ನಲ್ಲಿ ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟ.
ಸ್ಪೋಟಕ, ಕಾರ್ಗೆ ವೆಚ್ಚ
ಸ್ಪೋಟಕ ಹಾಗೂ ಕಾರು ಖರೀದಿಗೆ ಭಯೋತ್ಪಾದಕರು ಆರು ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು. ಆ ಮಾರುತಿ ಕಾರನ್ನು ಆತ್ಮಾಹುತಿ ದಾಳಿಗೆ ಬಳಸಿದ್ದರು. 200 ಕೆ.ಜಿ. ಅಮೋನಿಯಂ ನೈಟ್ರೇಟ್ ಸಹಿತ ಸ್ಪೋಟಕ ಖರೀದಿಸಲೆಂದೇ 2.80 ಲಕ್ಷ ರೂಪಾಯಿ ವ್ಯಯಿಸಿದ್ದರು ಎಂಬ ಅಂಶ ಆರೋಪಪಟ್ಟಿಯಲ್ಲಿದೆ.