VIDEO| ದೆಹಲಿ ಎಕ್ಸಿಟ್​​ ಪೋಲ್​ ಫಲಿತಾಂಶಕ್ಕೆ ಹೆದರಿ ಮನೋಜ್​ ತಿವಾರಿ ಕಣ್ಣೀರು ಹಾಕಿದ್ರಾ?

Manoj Tiwari
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಮನೋಜ್​ ತಿವಾರಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಲು ಸಹ ತಿವಾರಿ ಮುಂದಾಗಿದ್ದರು. ಆದರೆ, ಪಕ್ಷದ ವರಿಷ್ಠರು ಮನವೊಲಿಸಿದ ಬಳಿಕ ತಮ್ಮ ಸ್ಥಾನದಲ್ಲೇ ಮುಂದುವರಿದಿದ್ದಾರೆ.

ಈ ಎಲ್ಲ ಬೆಳವಣಿಗೆ ನಡುವೆಯೇ ಮತದಾನೋತ್ತರ ಸಮೀಕ್ಷೆ ಬೆನ್ನಲ್ಲೇ ತಿವಾರಿ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಕಣ್ಣೀರಿಟ್ಟಿದ್ದರು ಎಂಬ ಅಡಿಬರಹದೊಂದಿಗೆ ವಿಡಿಯೋವೊಂದು ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಝೈದ್​ ಇಮಾಮ್​ ಮತ್ತು ಅಯಾಜ್​ ಖಾನ್ ಸೇರಿದಂತೆ ಅನೇಕ ಫೇಸ್​ಬುಕ್​ ಬಳಕೆದಾರರು ತಿವಾರಿ ಅವರು ಭಾವುಕರಾಗಿರುವ ವಿಡಿಯೋವನ್ನು ಪೋಸ್ಟ್​ ಮಾಡಿ, ಈ ಮೇಲಿನಂತೆ ಬರೆದುಕೊಂಡಿದ್ದಾರೆ.

ಆದರೆ, ಈ ಬಗ್ಗೆ ಇಂಡಿಯಾ ಟುಡೆ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಎಕ್ಸಿಟ್​ ಪೋಲ್​ಗೂ ತಿವಾರಿ ವಿಡಿಯೋಗೂ ಸಂಬಂಧವಿಲ್ಲ ಎಂಬುದು ತಿಳಿದುಬಂದಿದೆ. ಎಕ್ಸಿಟ್​ ಪೋಲ್​ಗೂ ಒಂದು ತಿಂಗಳ ಮುಂಚೆಯೇ ತಿವಾರಿ ಅವರ ಸಂದರ್ಶನ ವಿಡಿಯೋ ಇದಾಗಿದೆ. ಸಂದರ್ಶನದಲ್ಲಿ ಪಾಲಕರ ಬಗ್ಗೆ ಮಾತನಾಡುತ್ತಾ ತಿವಾರಿ ಅವರು ಭಾವುಕರಾಗಿದ್ದರು ಎಂದು ತಿಳಿದುಬಂದಿದೆ.

ವಿಡಿಯೋದಲ್ಲಿರುವಂತೆ ಖಾಸಗಿ ಚಾನೆಲ್​ ಒಂದಕ್ಕೆ ತಿವಾರಿ ಅವರು ನೀಡಿದ ಸಂದರ್ಶನದ ವಿಡಿಯೋ ಇದಾಗಿದೆ. ವರದಿಗಾರರು ಹಿಡಿದಿರುವ ಮೈಕ್​ ಲೋಗೋ ಮೂಲಕವು ಇದು ಗೊತ್ತಾಗುತ್ತದೆ. ಇದನ್ನೇ ಸುಳಿವಾಗಿಟ್ಟುಕೊಂಡು ಯೂಟ್ಯೂಬ್​ನಲ್ಲೂ ಹುಡುಕಾಡಿದಾಗ ಅಸಲಿ ವಿಡಿಯೋ ಖಾಸಗಿ ಮಾಧ್ಯಮದ ಯುಟ್ಯೂಬ್​ನಲ್ಲಿ ಜನವರಿ 14, 2020ರಂದು ಅಪ್​ಲೋಡ್​ ಆಗಿದೆ. ಇದಕ್ಕೆ "ಕೇಜ್ರಿವಾಲ್​ಗೆ ನೀಡಿದ ಸವಾಲು ಹೊರತುಪಡಿಸಿ, ಮನೋಜ್​ ತಿವಾರಿ ತುಂಬಾ ಭಾವನಾತ್ಮಕ ವ್ಯಕ್ತಿ ಹೇಗೆ" ಎಂದು ಶೀರ್ಷಿಕೆ ನೀಡಲಾಗಿದೆ.

ಸಂದರ್ಶನದಲ್ಲಿ ವರದಿಗಾರ ಪಾಲಕರ ಬಗ್ಗೆ ಕೇಳಿದಾಗ ಆರಂಭದ ದಿನಗಳಲ್ಲಿ ಪಾಲಕರು ಅನುಭವಿಸುತ್ತಿದ್ದ ಕಷ್ಟವನ್ನು ವಿವರಿಸುತ್ತಾ ಮನೋಜ್​ ತಿವಾರಿ ಅವರು ಭಾವುಕರಾಗಿ ಕಣ್ಣೀರು ಹಾಕುತ್ತಾರೆ. ಇದೇ ವಿಡಿಯೋವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ಹರಡಿಸಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net