

ನವದೆಹಲಿ: ಕುರ್ಚಿಯ ಮೇಲೆ ಕುಳಿತು ಬಾಯಿ ಅಗಲಿಸಿ ನಿದ್ರಿಸುತ್ತಿರುವ ವ್ಯಕ್ತಿಯೊಟ್ಟಿಗೆ ಒಂದು ಗುಂಪಿನ ಜನ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫೋಟೋ ಕುರಿತು ಮಂಡಿಸಲಾಗಿರುವ ವಿಷಯ ಅಕ್ಷರಶಃ ಸುಳ್ಳು ಎಂಬುದನ್ನು ಫ್ಯಾಕ್ಟ್ಚೆಕ್ ಬಹಿರಂಗಪಡಿಸಿದೆ.
"ಡು ನಾಟ್ ಟ್ರೈ ದಿಸ್ ಅಟ್ ಹೋಮ್ ಓ ಮ್ಯಾನ್ ವಿ ಹ್ಯಾವ್ ಟು ಡು ದಿಸ್" ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ಫೋಟೋ ಶೇರ್ ಮಾಡಲಾಗಿದ್ದು, ಫೋಟೋ ಕುರಿತು ಕುರ್ಚಿಯ ಮೇಲೆ ಕುಳಿತಿರುವ ವ್ಯಕ್ತಿ ಹೃದಯಾಘಾತದಿಂದ ಬಳಲಿ ಕಚೇರಿಯಲ್ಲೇ ಸಾವಿಗೀಡಾಗಿದ್ದಾರೆ. ಆದರೆ, ಆತ ಮಲಗಿದ್ದಾನೆಂದು ತಿಳಿದ ಸಹೋದ್ಯೋಗಿಗಳು ಗುಂಪಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಅಡಿಬರಹ ಬರೆಯಲಾಗಿದೆ. ಈ ಫೋಟೋವನ್ನು ಸಾಕಷ್ಟು ಮಂದಿ ಶೇರ್ ಕೂಡ ಮಾಡಿಕೊಂಡಿದ್ದಾರೆ.
ಆದರೆ, ಫೋಟೋ ಕುರಿತು ಹೇಳಿರುವ ಮಾಹಿತಿ ಶುದ್ಧ ಸುಳ್ಳು ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಿಂದ ಬಹಿರಂಗವಾಗಿದೆ. ಫೋಟೋವನ್ನು ಗೂಗಲ್ ರಿವರ್ಸ್ ಸರ್ಚ್ ಇಂಜಿನ್ಗೆ ಹಾಕಿ ನೋಡಿದಾಗ ಫೋಟೋದಲ್ಲಿರುವ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿಲ್ಲ. ಬದಲಾಗಿ ಕೆಲಸ ಮಾಡುತ್ತಲ್ಲೇ ನಿದ್ರೆಗೆ ಜಾರಿದ ಸಮಯದಲ್ಲಿ ಆತನ ಸಹದ್ಯೋಗಿಗಳು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ, ಈತ ಹೇಗೆ ನಿದ್ರೆಗೆ ಜಾರಿದ ಹಾಗೂ ಆತ ಹೇಗೆ ಇಂಟರ್ನೆಟ್ ಮೀಮ್ಸ್ಗೆ ಗರಿಯಾದ ಎಂಬ ಸಾಕಷ್ಟು ವರದಿಗಳು ಪತ್ತೆಯಾಗಿವೆ.
ಮಾಧ್ಯಮ ವರದಿಯ ಪ್ರಕಾರ 2016ರ ಹಿಂದಕ್ಕೆ ಹೋದಾಗ ಎಡ್ವರ್ಡ್ ಪರಸ್ಚಿವೆಸ್ಕು ಎಂಬಾತ ಜಿಸಾಫ್ಟ್ ಎಂಬ ಕಂಪನಿಯಲ್ಲಿ ತರಬೇತಿ ಉದ್ಯೋಗಿ ಆಗಿ ಸೇರಿರುತ್ತಾನೆ. ಕಂಪನಿಯ ಎರಡನೇ ದಿನ ಕೆಲಸ ಮಾಡುತ್ತಲೇ ನಿದ್ರೆಗೆ ಜಾರುತ್ತಾನೆ. ಈ ವೇಳೆ ಆತನ ಸಹದ್ಯೋಗಿಗಳು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಬಳಿಕ ಇದು ಮೀಮ್ಸ್ಗಳಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ.
ಹೀಗಾಗಿ ಫೋಟೋ ಕುರಿತು ಸದ್ಯ ಹರಿದಾಡುತ್ತಿರುವ ಮಾಹಿತಿ ಕೇವಲ ವದಂತಿಯಷ್ಟೇ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಫ್ಯಾಕ್ಟ್ಚೆಕ್ನಿಂದ ತಿಳಿದುಬರುತ್ತದೆ. (ಏಜೆನ್ಸೀಸ್)