FACT CHECK| ಕ್ರೈಸ್ತ ಧರ್ಮಗುರು ಪೋಪ್​ ಫ್ರಾನ್ಸಿಸ್​ಗೆ ಕೊರೊನಾ ವೈರಸ್​ ಸೋಂಕು ಹರಡಿದೆಯೇ?

poop mar 20
Published on

ವ್ಯಾಟಿಕನ್​ ಸಿಟಿ: ಕೊರೊನಾ ವೈರಸ್​ ದಾಳಿ ವಿಶ್ವದಲ್ಲಿ ತಲ್ಲಣ ಮೂಡಿಸಿರುವ ವೇಳೆಯಲ್ಲೇ ವೈರಸ್​ ಬಗ್ಗೆ ವದಂತಿಗಳು ತೀವ್ರವಾಗಿ ಹರಡುತ್ತಿವೆ.

ಕ್ರೈಸ್ತ ಧರ್ಮಗುರು ಪೋಪ್​ ಫ್ರಾನ್ಸಿಸ್​ ಅವರಿಗೂ ಕೊರೊನಾ ವೈರಸ್​ ಸೋಂಕು ತಗುಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದೆ.

ಕೆಲವು ಪತ್ರಿಕೆಗಳು ಪೋಪ್​ ಅವರಿಗೆ ವೈರಸ್​ ಸೋಂಕು ಹರಡಿದೆ ಎಂದು ವರದಿ ಮಾಡಿವೆ. ಆದರೆ ಅದಕ್ಕೆ ಪುರಾವೆಗಳನ್ನು ಒದಗಿಸಿಲ್ಲ ಎಂಬುದು ಗಮನಾರ್ಹ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಚಾರ ಸತ್ಯವಲ್ಲ ಎಂಬುದು ಫ್ಯಾಕ್ಟ್​ಚೆಕ್​ನಿಂದ ಪತ್ತೆಯಾಗಿದೆ.

ಫೆಬ್ರವರಿ 26 ರಂದು ವ್ಯಾಟಿಕನ್‌ ಸಿಟಿಯಲ್ಲಿ ನಡೆದ ಕಾರ್ಯಕ್ರಮಲ್ಲಿ 83 ವರ್ಷದ ಪೋಪ್​ ಕೆಮ್ಮು ಹಾಗೂ ಸೀನುತ್ತಿರುವುದು ಕಂಡು ಬಂತು. ಇದನ್ನೇ ಆಧಾರವಾಗಿಟ್ಟುಕೊಂಡು ಕೆಲವರು ಅವರಿಗೆ ಕೊರೊನಾ ವೈರಸ್​ ಹರಡಿದೆ ಎಂದು ಜಾಲತಾಣಗಳಲ್ಲಿ ಸುದ್ದಿ ಹಬ್ಬಿಸತೊಡಗಿದರು.

"ಜಿತೇಶ್ ಸಕ್ಸೇನಾ ಎಂಬ ಫೇಸ್‌ಬುಕ್ ಬಳಕೆದಾರರು ಪೋಪ್ ಕೆಮ್ಮುವ ಛಾಯಾಚಿತ್ರಗಳನ್ನು ಅಪ್​ಲೋಡ್​ ಮಾಡಿ ಕೊರೊನಾ ಸೋಂಕು ಹರಡಿದೆ ಎಂದು ಬರೆದುಕೊಂಡಿದ್ದರು. ಅಲ್ಲದೆ ಅವರಿಗೆ ವೈರಸ್​ ಹರಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಹೇಳಿದ್ದರು.

ಪೋಪ್​ ಅವರಿಗೆ ವೈರಸ್​ ತಗುಲಿರುವ ಸುಳ್ಳು ವದಂತಿ ಹರಡುತ್ತಿದ್ದಂತೆ ಎಚ್ಚೆತ್ತ ವ್ಯಾಟಿಕ್​ ಸಿಟಿ ವಕ್ತಾರ ಮ್ಯಾಟಿಯೊ ಬ್ರೂನಿ ಅವರು ಮಾಹಿತಿ ನೀಡಿ ಪೋಪ್​ ಅವರಿಗೆ ಕೊರೊನಾ ವೈರಸ್​ ಹರಡಿಲ್ಲ. ಬದಲಿಗೆ ಅವರು ಅಲ್ಪ ಪ್ರಮಾಣದ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಇಟಾಲಿಯನ್​ ಪತ್ರಿಕೆ ಇಲ್​ ಮೆಸಾಗ್ಜೆರೊ ಮಾ.3ರಂದು ವರದಿಯನ್ನು ಪ್ರಕಟಿಸಿ. ಪೋಪ್​ ಅವರಿಗೆ ಎಲ್ಲ ರೀತಿಯ ಪರೀಕ್ಷೆ ನಡೆಸಲಾಗಿದ್ದು ಅವರಿಗೆ ಕೊರೊನಾ ಸೋಂಕು ಹರಡಿಲ್ಲ ಎಂದು ತಿಳಿಸಿದೆ.  (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net