Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್ ವಿಡಿಯೋಗೂ ಎನ್​ಆರ್​ಸಿಗೂ ಸಂಬಂಧವಿದೆಯೇ?

Police
Published on

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ವಿಡಿಯೋ ಕುರಿತು ವಾದಿಸಲಾಗಿದ್ದು, ಇದು ತಪ್ಪು ಮಾಹಿತಿ ಎಂಬುದು ಫ್ಯಾಕ್ಟ್​​ಚೆಕ್​ನಿಂದ ತಿಳಿದುಬಂದಿದೆ.

ಡೆಂಜಿಲ್​ ಬ್ರೌನ್​ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ವಿಡಿಯೋವನ್ನು ಅಪ್​ಲೋಡ್​ ಮಾಡಲಾಗಿದೆ. ಅಸ್ಸಾಂನಲ್ಲಿ ಎನ್​ಆರ್​ಸಿ ಆರಂಭವಾಗಿದೆ. ಪೊಲೀಸ್​ ಸಿಬ್ಬಂದಿ ಮನೆಯಿಂದ ಜನರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಆರಂಭಿಸಿದ್ದಾರೆ. ಮಾಧ್ಯಮಗಳು ಇವುಗಳನ್ನು ತೊರಿಸುವುದಿಲ್ಲ. ಅವುಗಳು ಮಾರಾಟವಾಗಿವೆ. ಹೀಗಾಗಿ ಇದು ನಮ್ಮ ಜವಾಬ್ದಾರಿ ಎಂದು ಅಡಿಬರಹ ಬರೆದು ಶೇರ್​ ಮಾಡಲಾಗಿದೆ. ಈವರೆಗೂ ವಿಡಿಯೋವನ್ನು 10 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 350 ಕ್ಕೂ ಹೆಚ್ಚು ಮಂದಿ ಶೇರ್​ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ​ ಎನ್​ಆರ್​ಸಿಗೂ ವೈರಲ್​ ವಿಡಿಯೋಗೂ ಸಂಬಂಧವಿಲ್ಲ. ಇದು ಐದು ವರ್ಷ ಹಿಂದಿನ ಹಳೆಯ ವಿಡಿಯೋವಾಗಿದ್ದು, ಅಪಪ್ರಚಾರ ಮಾಡಲು ಬಳಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ವಿಡಿಯೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ನಲ್ಲಿ ನೋಡಿದಾಗ "ಭಾರತ್​ ಪ್ರಭಾತ್​ ಪಾರ್ಟಿ" ಹೆಸರಿನ ಟ್ವಿಟರ್​ನಲ್ಲಿ ಇದೇ ರೀತಿಯ ವಿಡಿಯೋವನ್ನು ಅಪ್​ಲೊಡ್​ ಮಾಡಿರುವುದು ಕಂಡುಬಂದಿದೆ. ರಾಜಸ್ಥಾನ ಜೈಪುರದ ಕನೋಟಾ ಗ್ರಾಮದಲ್ಲಿ ದಲಿತರು, ಬಡವರು ಹಾಗೂ ಬುಡಕಟ್ಟು ಜನಾಂಗದ ಮನೆಗಳನ್ನು ಪೊಲೀಸರು ಧ್ವಂಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. 2019 ಆಗಸ್ಟ್​ 7ರಂದು ವಿಡಿಯೋ ಟ್ವೀಟ್​ ಮಾಡಲಾಗಿದೆ.

ಝೀರೋ ನ್ಯೂಸ್​ ಹೆಸರಿನ ಯೂಟ್ಯೂಬ್​ ಚಾನಲ್​ನಲ್ಲೂ ಇದೇ ವಿಡಿಯೋ ಅಪ್​ಲೋಡ್​ ಆಗಿದೆ. ಯಾವುದೇ ನೋಟಿಸ್​ ನೀಡದೆ ಜೈಪುರದ ಕನೋಟ ಗ್ರಾಮದಲ್ಲಿನ ಒಂದು ಭಾಗದ ಮನೆಗಳನ್ನು ಪೊಲೀಸರು ನಾಶ ಮಾಡುತ್ತಿದ್ದಾರೆ ಎಂಬ ವಿವರಣೆ ಲಭ್ಯವಾಗಿದೆ.

ಘಟನೆಯನ್ನು ಪರಿಶೀಲಿಸಲು ಇಂಡಿಯಾ ಟುಡೆ ತಂಡ ಕನೋಟ ಪೊಲೀಸ್​ ಠಾಣೆಗೆ ಭೇಟಿ ನೀಡಿದಾಗ ನಿಖರ ಮಾಹಿತಿ ಲಭ್ಯವಾಗಿದೆ. ಒತ್ತುವರಿ ವಿರುದ್ಧ ಜೈಪುರ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ಕಾರ್ಯಾಚರಣೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್​ನಲ್ಲಿ ಈ ಘಟನೆ ನಡೆದಿದ್ದು, ಎನ್​ಆರ್​ಸಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಕಾರ್ಯಾಚರಣೆಯ ನೇತೃತ್ವದ ವಹಿಸಿದ್ದ ಇನ್ಸ್​ಪೆಕ್ಟರ್​ ರಾಜೀವ್​ ಯದುವಂಶಿ ಮಾತನಾಡಿ, ಕೆಲವು ಮಂದಿ ಸಾಮಾನ್ಯ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಗೋಡೆ ನಿರ್ಮಾಣ ಮಾಡಿಕೊಂಡಿದ್ದರು. ಅದನ್ನು ಹೊಡೆದುರುಳಿಸುವಾಗ ಪೊಲೀಸ್​ ಸಿಬ್ಬಂದಿ ಮತ್ತು ಜನರ ನಡುವೆ ಕೆಲ ಘರ್ಷಣೆ ಉಂಟಾಯಿತು ಎಂದಿದ್ದಾರೆ.

ಒಟ್ಟಾರೆ ವೈರಲ್​ ಆಗಿರುವ ವಿಡಿಯೋಗೂ ಎನ್​ಆರ್​ಸಿಗೂ ಯಾವುದೇ ಸಂಬಂಧವಿಲ್ಲ ಎಂಬುದು ತಿಳಿದುಬಂದಿದ್ದು, ಇದರ ಹಿಂದೆ ಅಪಪ್ರಚಾರ ಉದ್ದೇಶವಿದೆ ಎಂಬುದು ಬಹಿರಂಗವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net