

ನವದೆಹಲಿ: ಮಹಾಮಾರಿ ಕರೊನಾ ವೈರಸ್ಗೆ 300 ವೈದ್ಯರು ಸೇರಿದಂತೆ ಕಳೆದ ತಿಂಗಳವರೆಗೂ ದೇಶಾದ್ಯಂತ 600 ಆರೋಗ್ಯ ಕಾರ್ಯಕರ್ತರು ಮೃತಪಟ್ಟಿದ್ದಾರೆ. 2000 ವೈದ್ಯರು ಸೇರಿದಂತೆ ಸುಮಾರು 87 ಸಾವಿರ ಆರೋಗ್ಯ ಕಾರ್ಯಕರ್ತರು ಸೋಂಕಿಗೆ ಒಳಗಾಗಿದ್ದಾರೆ.
ಇದರ ನಡುವೆಯೇ ಯುವತಿಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫೇಸ್ಬುಕ್ ಬಳಕೆದಾರರೊಬ್ಬರು ಫೋಟೋ ಪೋಸ್ಟ್ ಮಾಡಿದ್ದಾರೆ. ಗುಜರಾತಿನಿಂದ ದುಃಖಕರ ಸುದ್ದಿ ಇದಾಗಿದೆ. ನಿಜಕ್ಕೂ ಇದು ಶಾಕಿಂಗ್ ವಿಚಾರ. ಅತ್ಯುತ್ತಮ ಯುವ ವೈದ್ಯೆಯನ್ನು ಕಳೆದುಕೊಂಡಿದ್ದೇವೆ. ಅಹಮದಬಾದ್ನಲ್ಲಿ ಸ್ತ್ರೀರೋಗತಜ್ಞರಾಗಿರುವ ವಿಧಿ ಅವರು ಕೋವಿಡ್ ಸೋಂಕಿನಿಂದ ಮೃತರಾಗಿದ್ದಾರೆ. ಸಾವಿನ ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ. ಇತ್ತೀಚಿನ ದಿನಗಳಲ್ಲಿ ಭಾರತ ಯುವ ವೈದ್ಯರನ್ನು ಕಳೆದುಕೊಳ್ಳುತ್ತಿದೆ. ಆದರೂ ಯಾರೊಬ್ಬರು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಈ ಬಗ್ಗೆ ಗಮನವಹಿಸಿ ಎಂದು ಅಡಿಬರಹ ಬರೆದು ಫೋಟೋವನ್ನು ವೈರಲ್ ಮಾಡಿದ್ದಾರೆ.
ಆದರೆ, ವೈರಲ್ ಫೋಟೋ ಕುರಿತಾದ ಸುದ್ದಿ ಸುಳ್ಳೆಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಬಹಿರಂಗವಾಗಿದೆ. ಅಂದಹಾಗೆ ಫೋಟೋದಲ್ಲಿರುವುದು ವೈದ್ಯೆ ಅಲ್ಲವೇ ಅಲ್ಲ, ಅವರು ಭಾರತೀಯ ನಟಿ ಹಾಗೂ ಮಾಡೆಲ್ ಸಂಸ್ಕೃತಿ ಶೆನಾಯ್. ಇವರು ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವೈರಲ್ ಆಗಿರುವ ಫೋಟೋವನ್ನು ನೀವಿಲ್ಲಿ ಕಾಣಬಹುದಾಗಿದೆ.
ಇಂಡಿಯಾ ಟುಡೆ ಫ್ಯಾಕ್ಟ್ಚೆಕ್ ತಂಡ ಸಂಸ್ಕೃತಿ ಶೆನಾಯ್ ಅವರ ಕಚೇರಿಗೆ ಭೇಟಿ ನೀಡಿದ್ದು, ಫೋಟೋದಲ್ಲಿರುವ ಯುವತಿ ನಟಿ ಸಂಸ್ಕೃತಿ ಎಂಬುದು ಖಚಿತವಾಗಿದೆ. ಈ ಫೋಟೋವನ್ನು 2015ರಲ್ಲಿ ಮಲಯಾಳಂ ಸಿನಿಮಾ "ಅನರ್ಕಾಲಿ" ಚಿತ್ರೀಕರಣ ವೇಳೆ ತೆಗೆಯಲಾಗಿದೆ.
ಇನ್ನು ಸುಳ್ಳು ಸುದ್ದಿಗೆ ಸಂಬಂಧಿಸಿದಂತೆ ನಟಿ ಸಂಸ್ಕೃತಿ ಸಹ ಸೆಪ್ಟೆಂಬರ್ 14ರಂದು ತಮ್ಮ ಫೇಸ್ಬುಕ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಡಿಯರ್ ಫ್ರೆಂಡ್ಸ್ ನಾನು ಕೊಚ್ಚಿ ನಿವಾಸಿ ಸಂಸ್ಕೃತಿ ಶೆನಾಯ್ (22). ಕೆಲ ದುಷ್ಕರ್ಮಿಗಳು ನನ್ನನ್ನು ಗುಜರಾತಿನ ವೈದ್ಯೆ ವಿಧಿ, ಕರೊನಾದಿಂದ ಮೃತರಾಗಿದ್ದಾರೆಂದು ಬರೆದು ಫೋಟೋ ವೈರಲ್ ಮಾಡಿದ್ದಾರೆ. ಒಂದು ವೇಳೆ ನಿಧಿ ಹೆಸರಿನ ಯಾರಾದರೂ ಮೃತರಾಗಿದ್ದಾರೆ ಅವರಿಗೆ ಸಂತಾಪ ಸೂಚಿಸುತ್ತೇನೆ. ಆದರೆ, ವೈರಲ್ ಆಗಿರುವ ಫೋಟೋದಲ್ಲಿರುವುದು ನಾನು ಎಂದು ಬರೆದುಕೊಂಡಿದ್ದಾರೆ.
ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಸರ್ಚ್ ಇಂಜಿನ್ನಲ್ಲಿ ಹುಡುಕಾಡಿದಾಗ ಸ್ವತಃ ಸಂಸ್ಕೃತಿ ಅವರು 2016 ಜೂನ್ 15ರಂದು ಫೇಸ್ಬುಕ್ನಲ್ಲಿ ಫೋಟೋ ಪೋಸ್ಟ್ ಮಾಡಿರುವುದು ಗಮನಕ್ಕೆ ಬಂದಿದೆ. ಫೋಟೋ ಕುರಿತು ಬೇರೆ ಆ್ಯಂಗಲ್ನಿಂದ ಇನ್ನೂ ಒಂದು ಹಳೆಯ ಫೋಟೋ ಎಂದು ಅಡಿಬರಹ ಬರೆದುಕೊಂಡಿದ್ದಾರೆ.
ಹಾಗದರೆ ವಿಧಿ ಯಾರು?
ಅಂದಹಾಗೆ ವಿಧಿ ನಿಜವಾಗಿಯು ಮರಣ ಹೊಂದಿದ್ದಾರೆ. ಈ ಬಗ್ಗೆ ಇಂಡಿಯನ್ ಮೆಡಿಕಲ್ ಸ್ಟೂಡೆಂಟ್ ಆರ್ಗನೈಜೇಷನ್ನ ಸದಸ್ಯೆ ಮತ್ತು ಡಾ. ವಿಧಿ ಸ್ನೇಹಿತೆ ಡಾ. ಶುಭಮ್ ಕುಮಾರಿ ಇಂಡಿಯಾ ಟುಡೆಗೆ ಮಾಹಿತಿ ನೀಡಿದ್ದು, ಬಿಹಾರ ಮೂಲದ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದ ವಿಧಿ, ಇಂಟರ್ನ್ಶಿಪ್ಗಾಗಿ ಅಹಮದಬಾದ್ಗೆ ಬಂದಿದ್ದಳು. ಸೆಪ್ಟೆಂಬರ್ 9ರಂದು ಕರೊನಾ ಸೋಂಕಿನಿಂದ ಬಲಿಯಾದಳು ಎಂದು ಹೇಳಿದ್ದಾರೆ. ಹೀಗಾಗಿ ವೈರಲ್ ಫೋಟೋದಲ್ಲಿರುವ ವಿಧಿಯಲ್ಲಿ. ಬದಲಾಗಿ ಮಲಯಾಳಂ ನಟಿ ಸಂಸ್ಕೃತಿ. ಅಲ್ಲದೆ, ವಿಧಿ ಸಹ ಕರೊನಾದಿಂದಲೇ ಮೃತಪಟ್ಟಿದ್ದಾರೆ. (ಏಜೆನ್ಸೀಸ್)