

ಬೆಂಗಳೂರು: ಲಾಕ್ಡೌನ್ ನಡುವೆ ನಡೆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರನ ವಿವಾಹಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಂಡಿದ್ದರು ಎನ್ನುವ ಪೋಸ್ಟ್ಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ.
ಏ.17ರ ಶುಕ್ರವಾರ ಬಿಡದಿ ಬಳಿಯ ಕೇತಿಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ನಡೆದ ವಿವಾಹಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತೆರಳಿದ್ದರು ಎನ್ನುವ ಶೀರ್ಷಿಕೆ ಬರೆದು ಫೋಟೋ ಅಪ್ಲೋಡ್ ಮಾಡಲಾಗಿತ್ತು. ಈ ಪೋಸ್ಟ್ ಅನ್ನು ಹಲವು ಮಂದಿ ಹಂಚಿಕೊಂಡಿದ್ದರು. ಅಲ್ಲದೆ ಕೆಲವರು ಪ್ರತ್ರಿಕ್ರಿಯೆ ವ್ಯಕ್ತಪಡಿಸಿದ್ದರು.
ಬರಹಗಾರ, ರಾಜಕೀಯ ವಿಶ್ಲೇಷಕ ಎಂದು ಹೇಳಿಕೊಳ್ಳುವ ಟ್ವಿಟರ್ ಬಳಕೆದಾರ “ಪಿಂಕಿ ಚೌಬೆ” ಎಂಬುವವರು ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರ್ ಸ್ವಾಮಿ ಅವರ ಮದುವೆಗೆ ಸಿಎಂ ಯಡಿಯೂರಪ್ಪ ತೆರಳಿದ್ದರು ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದರು. ಇವರ ಈ ಪೋಸ್ಟ್ ಅನ್ನು 3,300ಕ್ಕೂ ಅಧಿಕ ಮಂದಿ ಬಳಕೆದಾರರು ಇಷ್ಟಪಟ್ಟಿದ್ದಾರೆ. ಅಲ್ಲದೆ ಸಾವಿರಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದಾರೆ.
ಬಡವರಿಗೊಂದು ಹಾಗೂ ಶ್ರೀಮಂತರಿಗೊಂದು ನ್ಯಾಯ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
ವೈರಲ್ ಆದ ಈ ಫೋಟೋ ಹಳೆಯದು. ನಿಖಿಲ್ ಕುಮಾರಸ್ವಾಮಿ ಅವರ ವಿವಾಹಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೆರಳಿಲ್ಲ ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಮಾಹಿತಿ ಹರಡಿದ್ದಾರೆ ಎಂಬುದು ಫ್ಯಾಕ್ಟ್ಚೆಕ್ನಿಂದ ಖಚಿತವಾಗಿದೆ.
ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ರೂಮ್ (ಎಎಫ್‌ಡಬ್ಲ್ಯೂಎ) ವೈರಲ್ ಆದ ಫೋಟೋ ನಿಖಿಲ್ ಕುಮಾರಸ್ವಾಮಿ ಅವರ ನಿಶ್ಚಿತಾರ್ಥದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಅವರು ಭಾಗವಹಿಸಿದ್ದರು. ನಿಶ್ಚಿತಾರ್ಥ ನಡೆದ ವೇಳೆ ಲಾಕ್ಡೌನ್ ಜಾರಿಯಲ್ಲಿರಲಿಲ್ಲ ಎಂಬುದನ್ನು ಪತ್ತೆ ಮಾಡಿದೆ.
2020ರ ಫೆಬ್ರವರಿ 10 ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಿಶ್ಚಿತಾರ್ಥ ನಡೆದಿತ್ತು. ಆಗ ಸಿಎಂ ಯಡಿಯೂರಪ್ಪ ಸೇರಿದಂತೆ ಅವರ ಸಂಪುಟದ ಸಚಿವರು ಪಾಲ್ಗೊಂಡಿದ್ದರು. ಆ ಫೋಟೋವನ್ನು ಈಗ ಅಪ್ಲೋಡ್ ಮಾಡಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. (ಏಜೆನ್ಸೀಸ್)