

ಶಿವಮೊಗ್ಗ: ಬೊಮ್ಮನಕಟ್ಟೆ ಬಡಾವಣೆ ಬಿ ಬ್ಲಾಕ್‌ನಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಕದಂಬ ಕನ್ನಡ ವೇದಿಕೆ ಜಿಲ್ಲಾಧ್ಯಕ್ಷ ವಿಶ್ವನಾಥ ಗೌಡ ನೇತೃತ್ವದಲ್ಲಿ ಸ್ಥಳೀಯರು ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್‌ಗೆ ಸೋಮವಾರ ಮನವಿ ಸಲ್ಲಿಸಿದರು.
ಶಿವಮೊಗ್ಗ ನಗರ ಸಂಪೂರ್ಣ ಅಭಿವೃದ್ಧಿ ಹೊಂದಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಸ್ಮಾರ್ಟ್‌ಸಿಟಿ, ಅಮೃತ್, ನಗರೋತ್ಥಾನ ಮಹತ್ವದ ಯೋಜನೆಗಳು ಶಿವಮೊಗ್ಗಕ್ಕೆ ಮಂಜೂರಾಗಿದ್ದರೂ ಹಳೇ ಬೊಮ್ಮನಕಟ್ಟೆ ಬಡಾವಣೆ ಬಿ ಬ್ಲಾಕ್ ಪರಿಸ್ಥಿತಿ ಇನ್ನೂ ಸುಧಾರಣೆಯಾಗಿಲ್ಲ ಎಂದು ಮನವಿಯಲ್ಲಿ ತಿಳಿಸಿದರು.
ಬಿ ಬ್ಲಾಕ್‌ನ ಮೈಲಮ್ಮ ದೇವಸ್ಥಾನದ ಎದುರಿನ ರಸ್ತೆಗಳಿಗೆ ಇಂದಿಗೂ ಚರಂಡಿ ನಿರ್ಮಿಸಿಲ್ಲ. ಇದಕ್ಕೆ ಅಧಿಕಾರಿಗಳು ಹೊಣೆಯೇ ಅಥವಾ ಸ್ಥಳೀಯ ಜನಪ್ರತಿನಿಧಿಗಳು ಕಾರಣವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.