

ಸ್ಯಾನ್ಫ್ರಾನ್ಸಿಸ್ಕೋ: ಸಂದೇಶ ರವಾನೆ, ವಿಡಿಯೋ ಕರೆ, ಧ್ವನಿ ಕರೆಗಳನ್ನು ಸುಲಭಗೊಳಿಸಿದ ವಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ 200 ಕೋಟಿ ತಲುಪಿದೆ ಎಂದು ಫೇಸ್ಬುಕ್ ಬುಧವಾರ ತಿಳಿಸಿದೆ.
ವಾಟ್ಸ್ಆ್ಯಪ್ ಈ ಬಗ್ಗೆ ಬ್ಲಾಗ್ ಪೋಸ್ಟ್ ಮಾಡಿದ್ದು, ಅದರಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದೆ. ಖಾಸಗಿ ಸಂವಹನ ಕೇವಲ ಮುಖತಃ ಭೇಟಿಯಿಂದ ಸಾಧ್ಯ ಎಂಬ ಸನ್ನಿವೇಶವನ್ನು ಬದಲಾಯಿಸಿದ್ದು ವಾಟ್ಸ್ಆ್ಯಪ್. ಈಗ ಜಗತ್ತಿನ ಯಾವ ಮೂಲೆಯಲ್ಲಿ ಯಾರೇ ಇದ್ದರೂ ತಮ್ಮ ಆಪ್ತರ ಜತೆಗೆ ಅಥವಾ ವ್ಯವಹಾರದ ವಿಚಾರವಾದರೂ ಸಂಬಂಧಿಸಿದ ವ್ಯಕ್ತಿಯ ಜತೆಗೆ ಖಾಸಗಿ ಮಾತುಕತೆ, ಸಂವಹನಕ್ಕೆ ವಿಡಿಯೋ ಕರೆ, ಇನ್ಸ್ಟಂಟ್ ಸಂದೇಶ ರವಾನೆಯಂತಹ ಸೌಲಭ್ಯಗಳನ್ನು ಒದಗಿಸುವ ಮೂಲಕ ಈ ಆ್ಯಪ್ ಅವಕಾಶ ಮಾಡಿಕೊಟ್ಟಿದೆ.
ಆಧುನಿಕ ಬದುಕಿನ ಅಗತ್ಯಕ್ಕೆ ತಕ್ಕಂತೆ ಮಾತುಕತೆಯ ಅಂಶ ಸೋರಿಕೆಯಾಗದಂತೆ ಅಥವಾ ಪ್ರೈವೆಸಿಗೆ ಧಕ್ಕೆಯಾಗದಂತೆ ಆ್ಯಪನ್ನು ಅಭಿವೃದ್ಧಿ ಪಡಿಸಲಾಗಿದೆ. ನಾವು ಪ್ರತಿಯೊಬ್ಬರ ಸಂವಹನದ ಸುರಕ್ಷತೆಯನ್ನು ಕಾಪಾಡುತ್ತೇವೆ ಎಂಬಿತ್ಯಾದಿ ವಿಷಯಗಳನ್ನು ವಾಟ್ಸ್ಆ್ಯಪ್ ತನ್ನ ಬ್ಲಾಗ್ನಲ್ಲಿ ಹಂಚಿಕೊಂಡಿದೆ.
ವಾಟ್ಸ್ಆ್ಯಪನ್ನು 2014ರಲ್ಲಿ ಫೇಸ್ಬುಕ್ ಖರೀದಿಸಿದ್ದು, ಅಲ್ಲಿಂದೀಚೆಗೆ ಆ್ಯಪ್ನಲ್ಲಿ ಹಲವು ಪರಿಷ್ಕರಣೆಗಳಾಗಿದ್ದು, ವಿವಿಧ ರೀತಿಯ ಸೌಲಭ್ಯಗಳು ಬಳಕೆದಾರರಿಗೆ ಸಿಕ್ಕಿದೆ. 2009 ರಲ್ಲಿ ಲೋಕಾರ್ಪಣೆಗೊಂಡಿರುವ ವಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ 2018ರ ಫೆಬ್ರವರಿ ಹೊತ್ತಿಗೆ 150 ಕೋಟಿ ಆಗಿತ್ತು. (ಏಜೆನ್ಸೀಸ್)