

ಸ್ಯಾನ್ ಫ್ರಾನ್ಸಿಸ್ಕೊ: ಸೋಷಿಯಲ್ ಮೀಡಿಯಾ ಕಂಪನಿ ಎಂಬ ಛಾಯೆಯಿಂದ ಹೊರಬರುವ ಸಲುವಾಗಿ ಫೇಸ್ಬುಕ್ ಮಾತೃಸಂಸ್ಥೆ ತನ್ನ ಹೆಸರನ್ನು ‘ಮೆಟಾ’ ಎಂದು ಬದಲಾಯಿಸಿಕೊಂಡಿದೆ. ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ವಾಟ್ಸ್ಆಪ್ಗಳ ಹೆಸರು ಹಾಗೆಯೇ ಮುಂದುವರಿಯಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ತನ್ನ ಭವಿಷ್ಯದ ವರ್ಚುವಲ್ ರಿಯಾಲಿಟಿ ವಿಷನ್ ಬಲಪಡಿಸಲು ಈ ಕ್ರಮ ತೆಗೆದುಕೊಂಡಿದೆ. ಮಹತ್ವಾಕಾಂಕ್ಷೆಯ ‘ಮೆಟಾವರ್ಸ್’ ನಿರ್ವಿುಸುವ ಮೂಲಕ ಭೌತಿಕ ಜಗತ್ತು ಮತ್ತು ಭ್ರಾಮಕ ಜಗತ್ತಿನ ನಡುವಿನ ತೆಳು ಪರದೆಯನ್ನು ಸರಿಸಲು ಮುಂದಾಗಿದೆ.
ಮೆಟಾವರ್ಸ್ ಎಂದರೆ?
ಇದೊಂದು ‘ವರ್ಚುವಲ್ ಎನ್ವಿರಾನ್ವೆುಂಟ್’. ಪರದೆ ಮೇಲೆ ನೋಡುವುದಷ್ಟೇ ಅಲ್ಲ, ಈ ವಾತಾವರಣದೊಳಕ್ಕೆ ಜನರು ಪ್ರವೇಶ ಮಾಡಬಹುದು. ಇದು ಕೊನೆ ಇಲ್ಲದ ಪ್ರಪಂಚ. ಇಲ್ಲಿ ಜನರು ವರ್ಚುವಲ್ ಕಮ್ಯೂನಿಟಿಗಳ ಮೂಲಕ ಪರಸ್ಪರ ಸಂಪರ್ಕ ಸಾಧಿಸಿಕೊಂಡು, ಒಟ್ಟಾಗಿ ಕೆಲಸ ಮಾಡಬಹುದು, ಆಟ ಆಡಬಹುದು. ಇದಕ್ಕಾಗಿ ಅವರು ವರ್ಚುವಲ್ ರಿಯಾಲಿಟಿ ಹೆಡ್ಸೆಟ್, ಆಗುಮೆಂಟೆಡ್ ರಿಯಾಲಿಟಿ ಗ್ಲಾಸ್ಗಳನ್ನು, ಸ್ಮಾರ್ಟ್ಫೋನ್ ಆಪ್ ಮತ್ತು ಇತರೆ ಉಪಕರಣಗಳನ್ನು ಬಳಸಬೇಕಾಗುತ್ತದೆ ಎಂದು ಪೇಸ್ಬುಕ್ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ವಿವರಿಸಿದ್ದಾರೆ.
ಮುಂದಿನ ಹಂತದ ಬೆಳವಣಿಗೆ
ಮೆಟಾವರ್ಸ್ನ ಅಭಿಮಾನಿಗಳು ಈ ವಿದ್ಯಮಾನವನ್ನು ಇಂಟರ್ನೆಟ್ ಜಗತ್ತಿನ ಮುಂದಿನ ಹಂತದ ಅಭಿವೃದ್ಧಿ ಅಥವಾ ಬೆಳವಣಿಗೆ ಎಂದು ಬಣ್ಣಿಸುತ್ತಿದ್ದಾರೆ. ಸದ್ಯ, ಸೋಷಿಯಲ್ ಮೀಡಿಯಾ ಆಪ್ ಮತ್ತು ಇತರೆ ಆಪ್ಗಳ ನೆರವಿನೊಂದಿಗೆ ಜನರು ಈಗ ಪರಸ್ಪರ ಸಂವಹನ ನಡೆಸುತ್ತಿದ್ದಾರೆ. ಮೆಟಾವರ್ಸ್ನಲ್ಲಿ ಈ ಸಂವಹನಕ್ಕೆ ವರ್ಚುವಲ್ ರಿಯಾಲಿಟಿ, ಆಗುಮೆಂಟೆಡ್ ರಿಯಾಲಿಟಿ ಮತ್ತು ಇತರೆ ತಂತ್ರಾಂಶಗಳ ಮೂಲಕ ಬಹು ಆಯಾಮಗಳು ಸಿಗಲಿವೆ.
ಮೆಟಾವರ್ಸ್ ಪ್ರವೇಶ
ಮೆಟಾವರ್ಸ್ಗೆ ಪ್ರವೇಶ ಬಗ್ಗೆ ಫೇಸ್ಬುಕ್ ಕಂಪನಿ ಸಿಇಒ ಜುಲೈನಲ್ಲೇ ಸುಳಿವು ನೀಡಿದ್ದರು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಫೇಸ್ಬುಕ್ ಕಂಪನಿ ಮೆಟಾವರ್ಸ್ ಕಂಪನಿಯಾಗಿ ರೂಪುಗೊಳ್ಳಲಿದೆ. ಇದೇ ರೀತಿ, ಮೈಕ್ರೋಸಾಫ್ಟ್, ರೊಬ್ಲಾಕ್ಸ್, ಫೋರ್ಟ್ನೈಟ್ ಕಂಪನಿಗಳು ಮೆಟಾವರ್ಸ್ಗೆ ಪ್ರವೇಶ ಪಡೆಯುತ್ತಿವೆ.