

ವಾಷಿಂಗ್ಟನ್: ಸಾಮಾಜಿಕ ಜಾಲತಾಣ ಫೇಸ್ಬುಕ್ ವಿರುದ್ಧ ಅಮೆರಿಕದಲ್ಲಿ ಹಲವು ಮೊಕದ್ದಮೆಗಳು ದಾಖಲಾಗಿದ್ದು, ಕಂಪನಿಗೆ ಆತಂಕ ಎದುರಾಗಿದೆ. ಫೇಸ್ಬುಕ್ ಈ ಹಿಂದೆ ಖರೀದಿಸಿದ್ದ ಇನ್ಸ್ಟಾಗ್ರಾಂ ಮತ್ತು ವಾಟ್ಸ್ ಆ್ಯಪ್ಗಳನ್ನು ಮಾರಾಟ ಮಾಡಬೇಕಾದ ಸಂದರ್ಭ ಎದುರಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಜುಗರ್ಬರ್ಗ್ರ ಸಾಮ್ರಾಜ್ಯ ಕುಸಿದು ಬೀಳಲಿದೆ. ಫೆಡರಲ್ ವಾಣಿಜ್ಯ ಆಯೋಗ (ಎಫ್ಟಿಸಿ) ಮತ್ತು 46 ರಾಜ್ಯಗಳು ಎರಡು ಪ್ರತ್ಯೇಕ ಮೊಕದ್ದಮೆ ಗಳನ್ನು ಹೂಡಿವೆ. ಒಂದು ಪ್ರಕರಣ ಎಫ್ಟಿಸಿಯದ್ದಾದರೆ ಇನ್ನೊಂದನ್ನು 48 ರಾಜ್ಯಗಳ ಅಟಾರ್ನಿ ಜನರಲ್ಗಳು ಒಟ್ಟಾಗಿ ಹೂಡಿದ್ದಾರೆ.
ಆರೋಪ ಏನು?: ಇನ್ಸ್ಟಾಗ್ರಾಂ ಮತ್ತು ವಾಟ್ಸ್ಆ್ಯಪ್ ಫೇಸ್ಬುಕ್ ಖರೀದಿಸಿದ್ದರಲ್ಲಿ ಏಕಸ್ವಾಮ್ಯ ಕಾನೂನಿನ ಉಲ್ಲಂಘನೆಯಾಗಿದೆ ಎಂಬುದು ಎರಡೂ ಮೊಕದ್ದಮೆಗಳ ಆರೋಪದ ಸಾರಾಂಶವಾಗಿದೆ. ಫೇಸ್ಬುಕ್ ವಿಶ್ವಾಸದ್ರೋಹ ಎಸಗಿದೆ. ಸ್ಪರ್ಧೆಯನ್ನು ಇಲ್ಲವಾಗಿಸಲು ಏಕಸ್ವಾಮ್ಯ ಅಧಿಕಾರವನ್ನು ಫೇಸ್ಬುಕ್ ದುರುಪಯೋಗಪಡಿಸಿಕೊಂಡಿದೆ ಎನ್ನಲಾಗಿದೆ. ಎರಡೂ ಕಂಪನಿಗಳನ್ನು ಫೇಸ್ಬುಕ್ ಖರೀದಿಸಿದ್ದಕ್ಕೆ ಕಾನೂನಾತ್ಮಕ ಅನುಮೋದನೆ ಪಡೆಯಲಾಗಿತ್ತು. ಆದರೆ, ಈ ವ್ಯವಹಾರಗಳನ್ನು ಇತ್ತೀಚೆಗೆ ಹೆಚ್ಚಿನ ಪರಿಶೀಲನೆಗೆ ಒಳಪಡಿಸಿದಾಗ ಫೇಸ್ಬುಕ್ ಸಮಸ್ಯೆಯ ಸುಳಿಗೆ ಸಿಕ್ಕಿ ಹಾಕಿಕೊಂಡಿದೆ.
ಫೇಸ್ಬುಕ್ ತೀವ್ರ ಅಸಮಾಧಾನ: ದೂರಿನ ಕುರಿತು ಫೇಸ್ಬುಕ್ ಅಸಮಾಧಾನ ವ್ಯಕ್ತಪಡಿಸಿದೆ. ವ್ಯವಹಾರಕ್ಕೆ ಎಫ್ಟಿಸಿ ಅನುಮೋದನೆ ನೀಡಿದ ಹಲವು ವರ್ಷಗಳ ನಂತರ ಸರ್ಕಾರ ಮರುಪರಿಶೀಲನೆಗೆ ಮುಂದಾಗಿದೆ. ಒಟ್ಟಾರೆಯಾಗಿ ವ್ಯಾಪಾರ ವ್ಯವಹಾರದ ಮೇಲೆ ಮತ್ತು ಪ್ರತಿದಿನ ನಮ್ಮ ಉತ್ಪನ್ನಗಳನ್ನು ಆಯ್ಕೆ ಮಾಡುವ ಗ್ರಾಹಕರ ಮೇಲೆ ಬೀರಬಹುದಾದ ಪರಿಣಾಮವನ್ನು ಪರಿಗಣಿಸದೆ ಅದು ಹೀಗೆ ಮಾಡಲು ಹೊರಟಿದೆ. ಇದೊಂದು ಕೆಟ್ಟ ಉದಾಹರಣೆ ಆಗಲಿದೆ’ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.
ನಾವು ಕಷ್ಟಪಟ್ಟು ಮೇಲೆ ಬಂದಿದ್ದೇವೆ. ನ್ಯಾಯಸಮ್ಮತವಾಗಿ ಸ್ಪರ್ಧಿಸಿದ್ದೇವೆ. ಆ ಕುರಿತು ನನಗೆ ಹೆಮ್ಮೆ ಇದೆ. | ಮಾರ್ಕ್ ಜುಕರ್ಬರ್ಗ್ ಫೇಸ್ಬುಕ್ ಸಿಇಒ
2019ರಲ್ಲಿ ತನಿಖೆ ಆರಂಭ: ಅಟಾರ್ನಿ ಜನರಲ್ಗಳ ಒಕ್ಕೂಟ 2019ರ ಸೆಪ್ಟೆಂಬರ್ನಲ್ಲಿ ಫೇಸ್ಬುಕ್ ವಿರುದ್ಧ ತನಿಖೆ ಆರಂಭಿಸಿತ್ತು. ಎಫ್ಟಿಸಿ ನಂತರ ಸಾಥ್ ನೀಡಿತ್ತು. ನ್ಯೂಯಾಕ್ ಅಟಾರ್ನಿ ಜನರಲ್ ಲೆಟಿಟಿಯಾ ಒಕ್ಕೂಟದ ಮುಖ್ಯಸ್ಥರು. 46 ರಾಜ್ಯಗಳಲ್ಲದೆ ವಾಷಿಂಗ್ಟನ್ ಡಿಸಿ ಮತ್ತು ಗುವಾನ ಅಟಾರ್ನಿ ಜನರಲ್ಗಳು ದೂರಿಗೆ ಸಹಿ ಹಾಕಿದ್ದಾರೆ. ಅಲಬಾಮಾ, ಜಾರ್ಜಿಯಾ, ದಕ್ಷಿಣ ಕರೊಲಿನಾ ಮತ್ತು ದಕ್ಷಿಣ ಡಕೋಟಾದ ಅಟಾರ್ನಿ ಜನರಲ್ಗಳು ಮಾತ್ರ ದೂರಿನಲ್ಲಿ ಭಾಗಿಯಾಗಿಲ್ಲ.
ದೂರುದಾರರ ಬೇಡಿಕೆ: ಇನ್ಸ್ಟಾಗ್ರಾಂ ಮತ್ತು ವಾಟ್ಸ್ಆಪ್ ವೇದಿಕೆಗಳನ್ನು ಫೇಸ್ಬುಕ್ನಿಂದ ಬೇರ್ಪಡಿಸಬೇಕು. ಭವಿಷ್ಯದಲ್ಲೂ ಯಾವುದೇ ಸಂಸ್ಥೆಯನ್ನು ವಿಲೀನಗೊಳಿಸಿಕೊಳ್ಳಲು ಅಥವಾ ಖರೀದಿಸಲು ಸರ್ಕಾರದ ಅನುಮತಿ ಪಡೆಯುವಂತೆ ಷರತ್ತು ವಿಧಿಸಬೇಕು ಎಂದು ದೂರುದಾರರು ಕೋರಿದ್ದಾರೆ.
ಪ್ರತಿಸ್ಪರ್ಧಿಗಳನ್ನು ತಟಸ್ಥಗೊಳಿಸುವ ತಂತ್ರ: ಸಾಮಾಜಿಕ ಮಾಧ್ಯಮ ಮಾರುಕಟ್ಟೆಯಲ್ಲಿ ಫೇಸ್ಬುಕ್ ಹೊಂದಿದ್ದ ಪಾರಮ್ಯಕ್ಕೆ ಸವಾಲೆಸೆಯುವ ಪ್ರತಿಸ್ಪರ್ಧಿಗಳನ್ನು ತಟಸ್ಥಗೊಳಿಸುವ ತಂತ್ರವನ್ನು ಫೇಸ್ಬುಕ್ ಬಳಸಿತ್ತು ಎಂದು ಆರೋಪಿಸಲಾಗಿದೆ. ಸ್ಪರ್ಧೆಯನ್ನು ಇಲ್ಲವಾಗಿಸಲು ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್ಗಳನ್ನು ಖರೀದಿಸಿತ್ತು. ಸಾಫ್ಟ್ವೇರ್ ಅಭಿವೃದ್ಧಿದಾರರ ಮೇಲೆ ‘ಸ್ಪರ್ಧೆ-ವಿರೋಧಿ ಸನ್ನಿವೇಶಗಳನ್ನು ಹೇರಿತ್ತು’ ಎಂದು ದೂರುದಾರರು ಆಪಾದಿಸಿದ್ದಾರೆ. 2012ರಲ್ಲಿ 715 ಮಿಲಿಯನ್ ಡಾಲರ್ಗೆ ಇನ್ಸ್ಟಾಗ್ರಾಂ ಮತ್ತು 2014ರಲ್ಲಿ 22 ಬಿಲಿಯನ್ ಡಾಲರ್ಗೆ ವಾಟ್ಸ್ಆ್ಯಪ್ಅನ್ನು ಫೇಸ್ಬುಕ್ ಖರೀದಿಸಿತ್ತು.
ಆದಾಯದ ಪ್ರಮುಖ ಮೂಲ: ಫೇಸ್ಬುಕ್ ಕಂಪನಿಯ ಬಹಳಷ್ಟು ಆದಾಯ ಇನ್ಸ್ಟಾಗ್ರಾಂನಿಂದಲೇ ಬರುತ್ತಿದೆ. ಫೇಸ್ಬುಕ್ನ ಡಿಜಿಟಲ್ ವ್ಯವಹಾರ ವಾಟ್ಸ್ ಆ್ಯಪ್ಅನ್ನು ಅವಲಂಬಿಸಿದೆ. ಹೀಗಾಗಿ, ಬೆನ್ನೆಲುಬಿನಂತಿರುವ ಈ ಎರಡೂ ವೇದಿಕೆಗಳು ಕೈ ತಪ್ಪಿದರೆ ಮಾರ್ಕ್ ಜುಕರ್ಬರ್ಗ್ ಕಟ್ಟಿರುವ ತಂತ್ರಜ್ಞಾನ ಸಾಮ್ರಾಜ್ಯ ಕುಸಿದು ಬೀಳಲಿದೆ. 2020ರಲ್ಲಿ ಫೇಸ್ಬುಕ್ ಷೇರು ಮೌಲ್ಯ ಶೇಕಡ 35ಕ್ಕಿಂತ ಅಧಿಕವಾಗಿ ಏರಿಕೆಯಾಗಿತ್ತು. ಆದರೆ, ಕಾನೂನು ಸಮರ ಆರಂಭವಾದ ಬುಧವಾರ ಶೇಕಡ 4ರಷ್ಟು ಕುಸಿತವಾಗಿದೆ.