ಅಮೆರಿಕ ಮಾಜಿ ಅಧ್ಯಕ್ಷರಿಗೆ ಶಾಕ್​ ಕೊಟ್ಟ​ ಫೇಸ್​ಬುಕ್​: 2 ವರ್ಷ ಡೊನಾಲ್ಡ್​ ಟ್ರಂಪ್ ಖಾತೆ ಬ್ಯಾನ್​!

trump
Published on

ವಾಷಿಂಗ್ಟನ್​: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಫೇಸ್​ಬುಕ್​ ಎರಡು ವರ್ಷಗಳ ಕಾಲ ನಿಷೇಧ ಹೇರಿದ್ದು, ಯುಎಸ್​ ಕ್ಯಾಪಿಟಲ್​ ಮೇಲೆ ಟ್ರಂಪ್​ ಬೆಂಬಲಿಗರಿಂದ ನಡೆದ ಮಾರಣಾಂತಿಕ ಹಲ್ಲೆಯ ಸಂಬಂಧ ಫೇಸ್​ಬುಕ್​ ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಟ್ರಂಪ್​ಗೆ ನೀಡಿರುವ ಶಿಕ್ಷೆಗೆ ಅವರು ಅರ್ಹರಾಗಿದ್ದಾರೆಂದು ಫೇಸ್​ಬುಕ್​ ಸಮಜಾಯಿಷಿ ನೀಡಿದೆ.

ಕಳೆದ ಜನವರಿ 7ರಿಂದಲೇ ಜಾರಿಗೆ ಬರುವಂತೆ ಮುಂದಿನ 2 ವರ್ಷದವರೆಗೆ ಅಂದರೆ ಜನವರಿ 2023ರವರೆಗೆ ಫೇಸ್​ಬುಕ್​ನಲ್ಲಿ ಟ್ರಂಪ್​ಗೆ ನಿಷೇಧ ಇರಲಿದೆ.

ಟ್ರಂಪ್ ಅವರ ಅಮಾನತಿಗೆ ಕಾರಣವಾದ ಸನ್ನಿವೇಶಗಳನ್ನು ಗಮನಿಸಿದರೆ, ಫೇಸ್​ಬುಕ್​ ವೇದಿಕೆಯ ನಿಯಮಗಳ ತೀವ್ರ ಉಲ್ಲಂಘನೆಯಾಗಿದೆ ಎಂದು ನಾವು ನಂಬುತ್ತೇವೆ. ನಿಯಮ ಉಲ್ಲಂಘನೆಯು ಜಾರಿಯಾಗಿರುವ ಹೊಸ ಪ್ರೋಟೋಕಾಲ್‌ಗಳ ಅಡಿಯಲ್ಲಿ ಲಭ್ಯವಿರುವ ಅತ್ಯಧಿಕ ದಂಡಕ್ಕೆ ಅರ್ಹವಾಗಿದೆ ಎಂದು ಫೇಸ್​ಬುಕ್​ ಉಪಾಧ್ಯಕ್ಷ ನಿಕ್​ ಕ್ಲೆಗ್ಸ್​ ತಿಳಿಸಿದ್ದಾರೆ.

ಬ್ಯಾನ್​ ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್​, ಅಮೆರಿಕ ಚುನಾವಣೆಯಲ್ಲಿ ನನ್ನ ಪರ ಮತಚಲಾಯಿಸಿದ ಮತದಾರರಿಗೆ ಮಾಡಿದ ಅವಮಾನ ಎಂದು ಟೀಕಿಸಿದ್ದಾರೆ.

ಟ್ರಂಪ್​ ಖಾತೆ ಬ್ಯಾನ್​ ಮಾಡುವ ವೇಳೆಯೇ ಮತ್ತೊಂದು ಎಚ್ಚರಿಕೆ ನೀಡಿರುವ ಫೇಸ್​ಬುಕ್​ ಇನ್ನು ಮುಂದೆ ರಾಜಕಾರಣಿಗಳ ಖಾತೆಯ ಮೇಲೆ ತೀವ್ರ ಗಮನ ಇಡಲಾಗಿರುತ್ತದೆ. ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

ಇನ್ನು ಟ್ರಂಪ್​ ಅವರನ್ನು ಟ್ವಿಟರ್​ ಈಗಾಗಲೇ ಶಾಶ್ವತವಾಗಿ ತನ್ನ ವೇದಿಕೆಯಿಂದ ನಿಷೇಧಿಸಿದೆ. ಅಮೆರಿಕ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ತನ್ನ ಬೆಂಬಲಿಗರು ಕ್ಯಾಪಿಟಲ್​ ಹಿಲ್​ ಕಟ್ಟಡದ ಮೇಲೆ ದಾಳಿ ನಡೆಸಿ, ಫೈರಿಂಗ್​​ ಮಾಡಿದ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡು "ನಾವು ನಿಮ್ಮನ್ನು ಇಷ್ಟಪಡುತ್ತೇವೆ, ನೀವು ತುಂಬಾ ವಿಶೇಷ ನನಗೆ" ಎಂದು ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂನಿಂದ ಟ್ರಂಪ್​ ಅವರನ್ನು ಬ್ಯಾನ್​ ಮಾಡಲಾಗಿತ್ತು. ಇದೀಗ ಎರಡು ವರ್ಷಗಳವರೆಗೆ ಬ್ಯಾನ್​ ಮುಂದುವರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net