ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ

ark1
ಅರಕಲಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಾಗಾರವನ್ನು ಉಚಿತವಾಗಿ ಹಮ್ಮಿಕೊಂಡಿರುವ ಕಾಲೇಜಿನ ಪ್ರಾಂಶುಪಾಲ ಮಹೇಶ್ ಮತ್ತು ತಂಡದವರನ್ನು ಶಾಸಕ ಎ. ಮಂಜು ಅಭಿನಂದಿಸಿದರು.
Published on

ಅರಕಲಗೂಡು: ವಿದ್ಯೆ ಕಲಿತು ಮನೆಯಲ್ಲಿ ಕೂರದೆ ಉತ್ತಮ ತರಬೇತಿ ಹೊಂದುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ ಉನ್ನತ ಹುದ್ದೆಗೇರಬೇಕು ಎಂದು ಶಾಸಕ ಎ.ಮಂಜು ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ತರಬೇತಿ ಹಮ್ಮಿಕೊಳ್ಳುವುದು ನನ್ನ ಕನಸಾಗಿದೆ. ವಿದ್ಯೆ ಅದು ನಮ್ಮ ಹಕ್ಕು. ಕನಸುಗಾರರಾಗಿದ್ದರೆ ನನಸು ನಿಜವಾಗಲೂ ಆಗುತ್ತದೆ. ನನ್ನ ಸಂಪೂರ್ಣ ವಿದ್ಯಾಭ್ಯಾಸ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಆಗಿದೆ. ನನಗೆ ಸಂಸ್ಕಾರ ಬಂದಿರುವುದೇ ಈ ಶಾಲಾ-ಕಾಲೇಜುಗಳಲ್ಲಿ ಕಲಿತ್ತಿದ್ದರಿಂದ. ಗ್ರಾಮೀಣ ಮಕ್ಕಳ ವಿಕಸನಕ್ಕೆ ಈ ಕಾರ್ಯಾಗಾರ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ಇಂದಿನ ತರಬೇತಿ ಕಾರ್ಯಾಗಾರಕ್ಕೆ ಇಡೀ ರಾಜ್ಯದಿಂದಲೇ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡು ಭಾಗವಹಿಸಿದ್ದಾರೆ. ಸುಮಾರು 400ಕ್ಕೂ ಹೆಚ್ಚು ಜನರು ಭಾಗವಹಿಸಿರುವುದು ಸಂತಸ ತಂದಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ರಾಜ್ಯ ಮಟ್ಟದ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ತರಬೇತಿ ಒಂದು ವಾರ ನಡೆಯಲಿದ್ದು, ಇಲ್ಲಿ ಭಾಗವಹಿಸಿರುವ ಎಲ್ಲ ನಿರುದ್ಯೋಗಿ ಯುವಕ, ಯುವತಿಯರು ಬಳಕೆ ಮಾಡಿಕೊಂಡು ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಬೇಕು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಂದುಕೊಂಡ ಹುದ್ದೆಯನ್ನು ಪಡೆದು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಮಹೇಶ್ ಮಾತನಾಡಿ, ರಾಜ್ಯದ 19 ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡು ಇಲ್ಲಿ ನಡೆಯುತ್ತಿರುವ ಉಚಿತ ತರಬೇತಿ ಕಾರ್ಯಾಗಾರಕ್ಕೆ ಬಂದಿದ್ದಾರೆ. ಹಾಸನ ಜಿಲ್ಲೆಯಿಂದ 244 ಹಾಗೂ ಇತರ ಜಿಲ್ಲೆಗಳಿಂದ 166 ಕ್ಕೂ ಅಧಿಕ ಸಂಖ್ಯೆಯಲ್ಲಿ ಬಂದಿದ್ದಾರೆ. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಆರು ದಿನಗಳವರೆಗೆ ಉಚಿತ ತರಬೇತಿ ದೊರೆಯಲಿದೆ.ನಮ್ಮ ಕಾಲೇಜಿನ ಕೆಲ ಉಪನ್ಯಾಸಕರು, ರೋಟರಿ ವತಿಯಿಂದ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳೀಗೆ ಮಧ್ಯಾಹ್ನದ ಉಪಾಹಾರ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಹೇಳಿದರು.

ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವ ಶಿವಮೊಗ್ಗ ಸ್ಪರ್ಧಾ ಅಕಾಡೆಮಿಯ ಡಿ. ನಂಜನಾಥ ಅವರು ತರಬೇತಿ ನಡೆಸಿಕೊಟ್ಟರು. ಕಾಲೇಜು ಉಪನ್ಯಾಸಕರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net