

ಬೆಟ್ಟದಪುರ: ನಮ್ಮ ವೇಗದ ಜಗತ್ತಿನಲ್ಲಿ ಹದಿಹರೆಯದವರು ಎದುರಿಸುತ್ತಿರುವ ಸವಾಲುಗಳು ಹಿಂದೆಂದಿಗಿಂತಲೂ ಹೆಚ್ಚು ಜಟಿಲವಾಗಿವೆ. ನಿಮ್ಮಲ್ಲಿ ಇರುವಂತಹ ವಿಶೇಷ ಶಕ್ತಿಯಿಂದ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ಕವಿ ಹೇಮಚಂದ್ರ ದಾಳಗೌಡನಹಳ್ಳಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬೆಟ್ಟದಪುರ ಸರ್ಕಾರಿ ಪದವಿಪೂರ್ವ ಕಾಲೇಜು ವತಿಯಿಂದ ಸಮೀಪದ ಬೆಟ್ಟದತುಂಗಾ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಮಾತನಾಡಿ, ಕ್ರಿಯಾತ್ಮಕ ಬೆಳವಣಿಗೆ ಮತ್ತು ಬದಲಾವಣೆಯ ಅವಧಿಯಾಗಿದ್ದು, ಯುವಕರಲ್ಲಿ ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು ನಿರಂತರವಾಗಿ ಹೆಚ್ಚುತ್ತಿವೆ. ಜೀವನದ ಒತ್ತಡದ ಗತಿಯು, ಶಿಕ್ಷಣದಲ್ಲಿ ಉತ್ಕೃಷ್ಟತೆ, ಸಾಮಾಜಿಕ ಸಂಪರ್ಕಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು ಮತ್ತು ಭವಿಷ್ಯಕ್ಕಾಗಿ ಯೋಜಿಸುವ ನಿರೀಕ್ಷೆಗಳ ಜತೆಗೆ ಹದಿಹರೆಯದವರನ್ನು ಅಪಾರ ಒತ್ತಡಕ್ಕೆ ಒಳಪಡಿಸುತ್ತಿದೆ. ಶಿಕ್ಷಣದೊಂದಿಗೆ ಶಾಲಾ-ಕಾಲೇಜುಗಳು ಹಂತದಲ್ಲಿ ಸಿಗುವಂತ ಪ್ರತಿಯೊಂದು ಅವಕಾಶಗಳನ್ನು ಪ್ರತಿಯೊಬ್ಬರೂ ಸದುಪಯೋಗ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಉಪನ್ಯಾಸಕ ಹೇಮಚಂದ್ರ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಎನ್.ಜ್ಯೋತಿಪ್ರಸಾದ್, ಎನ್‌ಎಸ್‌ಎಸ್ ಶಿಬಿರಾಧಿಕಾರಿ ದಿವ್ಯಾ ಸಹ ಶಿಬಿರಾಧಿಕಾರಿ ರಾಜು, ಉಪನ್ಯಾಸಕರಾದ ಮಹಮದ್ ಖಾದಿರ್, ರಮೇಶ್‌ಕುಮಾರ್, ವಸಂತ್, ಸೃಜನ್, ರವಿ, ಸೌಮ್ಯಾ, ಸುಷ್ಮಾ, ಲೋಕೇಶ್, ಅಭಿಜಿತ್ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.