ಸಂಪಾದಕೀಯ | ಉಗ್ರರು ಮತ್ತೆ ತಲೆ ಎತ್ತದಿರಲಿ

ವಿಜಯವಾಣಿ (2)
Published on

ಹೊಸ ವರ್ಷದ ಮೊದಲ ದಿನವೇ ಭೀಕರ ಭಯೋತ್ಪಾದನಾ ದಾಳಿಗೆ ಜಗತ್ತಿನ ಪ್ರಬಲ ರಾಷ್ಟ್ರವೆಂದು ಕರೆಸಿಕೊಳ್ಳುವ ಅಮೆರಿಕ ತತ್ತರಿಸಿಹೋಗಿದೆ. ನ್ಯೂ ಆರ್ಲಿಯನ್ಸ್ ನಗರದ ಫ್ರೆಂಚ್ ಕ್ವಾರ್ಟರ್ ಎಂಬ ಸ್ಥಳದಲ್ಲಿ ಈ ದಾಳಿ ಸಂಭವಿಸಿದೆ. ಶಂಶುದ್ದೀನ್ ಜಬ್ಬಾರ್ ಎಂಬಾತ ಬಿಳಿ ಬಣ್ಣದ ಪಿಕ್​ಅಪ್ ಟ್ರಕ್ ಚಲಾಯಿಸಿಕೊಂಡು ಬಂದು ಜನರ ಮೇಲೆ ಮನಸೋಇಚ್ಛೆ ಹರಿಸಿದ್ದಾನೆ. ಇದರಲ್ಲಿ 15 ಮಂದಿ ಮೃತಪಟ್ಟು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ದಾಳಿಕೋರ 42 ವರ್ಷದ ಅಮೆರಿಕನ್ ನಾಗರಿಕನಾಗಿದ್ದು, ಅಲ್ಲಿನ ಮಿಲಿಟರಿಯಲ್ಲಿ ಹಿಂದೆ ಸೇವೆ ಸಲ್ಲಿಸಿದ್ದ ಎಂದು ಹೇಳಲಾಗುತ್ತಿದೆ. ಪೊಲೀಸರ ಗುಂಡೇಟಿಗೆ ಆತನೂ ಮೃತಪಟ್ಟಿದ್ದಾನೆ. ಟ್ರಕ್​ನಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಧ್ವಜ ಮತ್ತು ಸ್ಪೋಟಕಗಳು ಸಿಕ್ಕಿರುವುದರಿಂದ ಈ ಕೃತ್ಯದ ಹಿಂದೆ ಉಗ್ರಗಾಮಿ ಸಂಘಟನೆಗಳ ಕೈವಾಡ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೃತ್ಯ ನಡೆಸುವುದಕ್ಕೆ ಕೆಲವೇ ಗಂಟೆಗಳ ಮುಂಚೆ ಜಬ್ಬಾರ್ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿರುವ ವಿಡಿಯೋಗಳು ಆತ ಐಎಸ್​ನಿಂದ ಪ್ರೇರಿತನಾದವನು ಎಂಬುದನ್ನು ಖಚಿತಪಡಿಸಿವೆ.

ಇರಾಕ್ ಮತ್ತು ಸಿರಿಯಾದಲ್ಲಿ ಸ್ಥಾಪನೆಯಾದ ಐಎಸ್ ಇತ್ತೀಚಿನ ದಿನಗಳಲ್ಲಿ ಇತರ ರಾಷ್ಟ್ರಗಳನ್ನೂ ಗೌಪ್ಯವಾಗಿ ಆವರಿಸಿಕೊಂಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಶೇಷ ಸಂದರ್ಭಗಳನ್ನು ನೋಡಿಕೊಂಡು ದಾಳಿ ನಡೆಸುವಂತೆ ತನ್ನ ‘ಯೋಧ’ರಿಗೆ ಕರೆ ನೀಡುವ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ನ್ಯೂ ಆರ್ಲಿಯನ್ಸ್ ದಾಳಿ ನಡೆದ ಕೆಲವೇ ಗಂಟೆಗಳ ಬಳಿಕ, ಲಾಸ್​ವೇಗಾಸ್​ನಲ್ಲಿರುವ ಟ್ರಂಪ್ ಇಂಟರ್​ನ್ಯಾಶನಲ್ ಹೋಟೆಲ್ ಮುಂಭಾಗದಲ್ಲಿ ಟೆಸ್ಲಾ ಸೈಬರ್ ಟ್ರಕ್ ಸ್ಪೋಟಗೊಂಡಿದೆ. ಅದರಲ್ಲಿ ಒಬ್ಬ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಈ ಘಟನೆಗೂ, ಜಬ್ಬಾರ್ ದಾಳಿಗೂ ಸಂಬಂಧ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಬ್ಬಾರ್ ಒಬ್ಬನೇ ದಾಳಿ ನಡೆಸಿರಲು ಸಾಧ್ಯವಿಲ್ಲ, ಆತನ ಹಿಂದೆ ಹಲವು ವಿಧ್ವಂಸಕ ಶಕ್ತಿಗಳ ಕುಮ್ಮಕ್ಕು ಇರಬಹುದು ಎಂಬ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ. ಇರಾಕ್ ಮತ್ತು ಸಿರಿಯಾದಲ್ಲಿ ತನ್ನ ಭೌತಿಕ ಅಸ್ತಿತ್ವ ಕಳೆದುಕೊಂಡ ಐಎಸ್ ಈಗ ಇತರೆಡೆ ಚಿಗುರೊಡೆಯಲು ಪ್ರಯತ್ನಿಸುತ್ತಿದೆ. ಅಫ್ಘಾನಿಸ್ತಾನ, ಆಫ್ರಿಕಾದಲ್ಲೂ ಅದರ ಟಿಸಿಲುಗಳಿವೆ. 2014-15ರಲ್ಲಿ ಅದು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಭಯೋತ್ಪಾದನೆಯನ್ನು ಯಶಸ್ವಿಯಾಗಿ ವಿವಿಧ ರಾಷ್ಟ್ರಗಳಿಗೆ ವಿಸ್ತರಣೆ ಮಾಡಿತ್ತು. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಬೆಲ್ಜಿಯಂ ಸೇರಿದಂತೆ ಹಲವು ದೇಶಗಳಲ್ಲಿ ಐಎಸ್-ಪ್ರೇರಿತ ಹಲವಾರು ದಾಳಿಗಳು ನಡೆದಿದ್ದವು. ನಂತರದ ದಿನಗಳಲ್ಲಿ ಆಯಾ ರಾಷ್ಟ್ರಗಳಲ್ಲಿನ ರಕ್ಷಣಾ ಕ್ರಮಗಳು ಮತ್ತು ತನ್ನದೇ ಆಂತರಿಕ ದೌರ್ಬಲ್ಯಗಳಿಂದಾಗಿ ಐಎಸ್ ಕ್ಷೀಣಿಸಿತ್ತು.

ಇದೀಗ ಸಿರಿಯಾದಲ್ಲಿ ಬಷರ್-ಅಲ್-ಅಸದ್ ಅಧಿಕಾರ ಕಳೆದುಕೊಂಡು ಪಲಾಯನ ಮಾಡಿರುವ ಹಿನ್ನೆಲೆಯಲ್ಲಿ ಐಎಸ್ ತನ್ನ ಅಸ್ತಿತ್ವವನ್ನು ಮರುಸ್ಥಾಪಿಸುವ ಹುನ್ನಾರ ನಡೆಸಿದೆ. ಅದರ ‘ಯೋಧ’ರು ಅಲ್ಲಿನ ಸರ್ಕಾರಿ ಶಸ್ತ್ರಾಗಾರಗಳಲ್ಲಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಪಹರಿಸಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ, ನ್ಯೂ ಆರ್ಲಿಯನ್ಸ್ ದಾಳಿಯು ಅಮೆರಿಕಕ್ಕೆ ಒಂದು ಎಚ್ಚರಿಕೆಯ ಸಂಕೇತವಷ್ಟೇ. ಮುಂದೆ ಸಂಭವಿಸಬಹುದಾದ ದೊಡ್ಡ ದಾಳಿಗಳಿಗೆ ಇದು ಮುನ್ಸೂಚನೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶದಂತಹ ರಾಷ್ಟ್ರಗಳೂ ಮುನ್ನೆಚ್ಚರಿಕೆ ವಹಿಸಲು ಇದು ಸಕಾಲ. ಐಎಸ್ ಉಗ್ರ ಸಂಘಟನೆ ಮತ್ತೆ ತಲೆ ಎತ್ತಲು ಯಾವ ರಾಷ್ಟ್ರವೂ ಯಾವ ಕಾರಣಕ್ಕೂ ಅವಕಾಶ ನೀಡಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net