ಪಾಕ್ ಚುನಾವಣಾ ಕಣಕ್ಕೆ ಉಗ್ರರು!

Pak Terrorist
Published on

ಇಸ್ಲಾಮಾಬಾದ್: ಮುಂಬೈ ಸ್ಪೋಟದ ಮಾಸ್ಟರ್​ವೆುೖಂಡ್ ಉಗ್ರ ಹಫೀಜ್ ಸಯೀದ್ ಬೆಂಬಲಿತ ಪಕ್ಷವು ಮುಂಬರುವ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದೆ. ಪಾಕಿಸ್ತಾನಿ ಇಂಗ್ಲಿಷ್ ದೈನಿಕ ಡಾನ್ ಈ ಬಗ್ಗೆ ವರದಿ ಮಾಡಿದ್ದು, ಹಫೀಜ್ ಮುಹಮ್ಮದ್ ಸಯೀದ್ ಬೆಂಬಲಿತ ಪಕ್ಷವೆಂದು ಪರಿಗಣಿಸಲಾದ ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಪ್ರತಿಯೊಂದು ರಾಷ್ಟ್ರೀಯ ಮತ್ತು ಪ್ರಾಂತೀಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಇದಕ್ಕಾಗಿ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಹಫೀಜ್ ಪುತ್ರ ತಲ್ಹಾ ಸಯೀದ್ ಕೂಡ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾನೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ತಲ್ಹಾ ಲಾಹೋರ್​ನ ನ್ಯಾಷನಲ್ ಅಸೆಂಬ್ಲಿಯ ಕ್ಷೇತ್ರ-127ರಿಂದ ಸ್ಪರ್ಧಿಸುತ್ತಿದ್ದಾನೆ ಎನ್ನಲಾಗಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ.

ಲಷ್ಕರ್-ಎ-ತೊಯ್ಬಾ (ಎಲ್​ಇಟಿ) ಸಂಸ್ಥಾಪಕ ಸಯೀದ್ 2019ರಿಂದ ಪಾಕಿಸ್ತಾನದ ಜೈಲಿನಲ್ಲಿದ್ದಾನೆ. ನಿಷೇಧಿತ ಉಗ್ರ ಸಂಘಟನೆ ಜಮಾತ್-ಉದ್-ದವಾ (ಜೆಯುಡಿ) ಸಹಿತ ಇತರ ಹಲವು ಉಗ್ರ ನಾಯಕರೊಂದಿಗೆ ಸಂಪರ್ಕ ಹೊಂದಿರುವುದು, ಭಯೋತ್ಪಾದನಾ ಕೃತ್ಯಕ್ಕೆ ಹಣಕಾಸು ನೆರವು ನೀಡಿದ ಪ್ರಕರಣಗಳಲ್ಲಿ ಕೋರ್ಟ್ ಈತನಿಗೆ ಜೈಲು ಶಿಕ್ಷೆ ನೀಡಿದೆ. ಆದರೆ ಜೈಲಿನಿಂದಲೇ ಈತ ಸಕ್ರಿಯವಾಗಿದ್ದು, ಉಗ್ರ ಜಾಲವನ್ನು ನಿಯಂತ್ರಣ ಮಾಡುತ್ತಿದ್ದಾನೆ ಎನ್ನಲಾಗಿದೆ. ಸಯೀದ್ ನೇತೃತ್ವದ ಜೆಯುಡಿ, ಎಲ್​ಇಟಿಯ ಉಪ ಸಂಘಟನೆಯಾಗಿದೆ. ಇದು 166 ಜನರ ಸಾವಿಗೆ ಕಾರಣವಾದ 2008ರ ಮುಂಬೈ ದಾಳಿ ಹೊಣೆ ಹೊತ್ತುಕೊಂಡಿತ್ತು.

ನವಾಜ್ ಷರೀಫ್ ವಿರುದ್ಧ ಯಾರು ಕಣಕ್ಕೆ?: ಪಿಎಂಎಂಎಲ್​ನ ಅಧ್ಯಕ್ಷ ಖಾಲಿದ್ ಮಸೂದ್ ಸಿಂಧು ಲಾಹೋರ್​ನಿಂದ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಸ್ಪರ್ಧಿಸುತ್ತಿದ್ದಾನೆ ಎನ್ನಲಾಗಿದೆ. ಪಾಕಿಸ್ತಾನವನ್ನು ಇಸ್ಲಾಮಿಕ್ ಕಲ್ಯಾಣ ರಾಜ್ಯ ಮಾಡುವುದು ನಮ್ಮ ಗುರಿ ಎಂದು ಆತ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾನೆ. ಆದರೆ ಪಿಎಂಎಂಎಲ್​ಗೆ ಹಫೀಜ್ ಸಯೀದ್​ನ ಬೆಂಬಲವಿಲ್ಲ ಎಂದು ಖಾಲಿದ್ ಬಹಿರಂಗ ಹೇಳಿಕೆ ನೀಡಿದ್ದಾನೆ. ಮಿಲಿ ಮುಸ್ಲಿಂ ಲೀಗ್ (ಎಂಎಂಎಲ್) ಕೂಡ ಜೆಯುಡಿಯ ರಾಜಕೀಯ ಅಂಗ ಸಂಸ್ಥೆಯಾಗಿದೆ. ಇದು ಹೆಚ್ಚಿನ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವಿಶೇಷವಾಗಿ ಪಂಜಾಬ್ ಪ್ರಾಂತ್ಯವನ್ನು ಇದು ಟಾರ್ಗೆಟ್ ಮಾಡಿದೆ. ಆದರೆ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಗೆದ್ದಿರಲಿಲ್ಲ. 2024ರ ಚುನಾವಣೆಗೆ ಎಂಎಂಎಲ್ ಮೇಲೆ ನಿಷೇಧ ಹೇರಲಾಗಿದೆ. ಹೀಗಾಗಿ ಪಿಎಂಎಂಎಲ್ ಪಕ್ಷವನ್ನು ಅಸ್ತಿತ್ವಕ್ಕೆ ತರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net