

| ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ
‘ಶ್ರೀರಾಮ! ಆ ಯುದ್ಧದ ಭಯಂಕರ ದೃಶ್ಯವನ್ನು ನೋಡುತ್ತಿರುವ ಹೆಣ್ಣು ಬೇತಾಳಗಳು ವ್ಯಾಕುಲಗೊಂಡು ಸೇನೆಯ ಮೇಲೆ ಮುದ್ಗರ ಎಂಬ ಆಯುಧಗಳನ್ನು ಎಸೆಯುತ್ತಿದ್ದಾರೆ. ಏಕೆಂದರೆ ಆ ಹೆಣ್ಣು ಬೇತಾಳಗಳು ಸೇನೆಗಳನ್ನು ಕುರಿತು ವ್ಯಾಕುಲಗೊಂಡಿವೆ. ಅವರ ದೃಷ್ಟಿಯಲ್ಲಿ ಯುದ್ಧ ಮಾಡುತ್ತಿರುವ ಸೇನೆಗಳು ಗೆಲುವನ್ನು ಸಾಧಿಸಲು ಸಾಕಷ್ಟು ಪರಾಕ್ರಮವನ್ನು ತೋರಿಸುತ್ತಿಲ್ಲ. ಇನ್ನೊಂದೆಡೆ ಆಕಾಶದಷ್ಟು ಎತ್ತರಕ್ಕೆ ಶೂರರು ಎತ್ತಿಹಿಡಿದಿರುವ ತೋಮರ (ಈಟಿ) ಎಂಬ ಆಯುಧ ತೋರಣ ಕಟ್ಟಿದಂತೆ ಕಾಣುತ್ತಿತ್ತು.’
‘ಭುಶುಂಡಿ ಎಂಬ ಆಯುಧ ಖಡ್ಗಗಳನ್ನು ಕತ್ತರಿಸಿ ಹಾಕುತ್ತಿತ್ತು. ಆಕಾಶದಷ್ಟು ಎತ್ತರಕ್ಕೆ ಹಾರುತ್ತಿರುವ ಆ ಖಡ್ಗಗಳ ತುಣುಕುಗಳು ಆಕಾಶದ ಕೇಶಗಳಂತೆ ಕಂಡುಬರುತಿದ್ದವು. ಕುಂತಾಯುಧ ಎಂಬ ಆಯುಧಗಳು ಆಕಾಶದಲ್ಲಿ ಬೀಸಲ್ಪಡುತ್ತಿರುವುದನ್ನು ನೋಡಿದರೆ, ಬಿದಿರಿನ ಕಾಡಿಗೆ ಹೊತ್ತಿಕೊಂಡ ದಾವಾಗ್ನಿಯಂತೆ ಆ ಆಯುಧಗಳ ಹೊಳಪು ಕಂಡು ಬರುತ್ತಿತ್ತು. ಖಡ್ಗ, ಯಷ್ಟಿ ಮುಂತಾದ ಆಯುಧಗಳ ಮಳೆಗೈಯುತ್ತಿರುವ ಸೈನಿಕರನ್ನು ಕಂಡು ಸಂತುಷ್ಟಗೊಂಡ ರಾಜರು ಆ ಸೈನಿಕರನ್ನು ಅಭಿನಂದಿಸುತ್ತಿದ್ದರು. ಇನ್ನಷ್ಟು ಆಯುಧಗಳನ್ನುಪ್ರಯೋಗಿಸಲು ಪೋ›ತ್ಸಾಹಿಸುತ್ತಿ ದ್ದರು. ನಿಜವಾದ ಶೂರ ಸೈನಿಕರು ಶೂಲ ಎಂಬ ಆಯುಧಕ್ಕೆ ಸಿಕ್ಕಿ ಎತ್ತಿಹಿಡಿಯಲ್ಪಟ್ಟಾಗ ಆ ಶೂರರನ್ನು (ಆ ಶೂರರ ಜೀವಾತ್ಮಗಳನ್ನು) ಪಡೆಯಲು ಆಕಾಶದಲ್ಲಿಂದ ಅಪ್ಸರೆಯರು ಓಡಿಬರುತ್ತಿದ್ದರು.’
‘ಶರೀರದ ಅಂಗಗಳಿಗೆ ಹೊಳೆಯುವ ಆಭರಣಗಳನ್ನು ಮತ್ತು ಕವಚಗಳನ್ನು ತೊಟ್ಟಿರುವ ಭಟರಿಗೆ ಶತ್ರುಸೈನಿಕರ ಮೇಲೆ ಗದಾಪ್ರಹಾರವಾದಾಗ ಸಂತೋಷವಾಗುತ್ತಿತ್ತು. ಈ ಸಂತೋಷದಲ್ಲಿ ಅವರ ಮುಖಗಳು ಕಮಲದಂತೆ ಅರಳುತ್ತಿದ್ದವು. ನೋಡಿದರೆ ಗದಾಪ್ರಹಾರವೆಂಬ ತುಷಾರದಿಂದಲೇ ಆ ಮುಖಗಳೆಂಬ ಕಮಲಗಳು ಅರಳುತ್ತಿವೆ ಎಂಬಂತೆ ಕಾಣುತ್ತಿತ್ತು. (ಬೆಳಗಿನ ತುಷಾರತೆಯ ಇಬ್ಬನಿಗೆ ಕಮಲಗಳು ಅರಳುತ್ತವೆ ಎಂಬುದು ಪ್ರಸಿದ್ಧವಾಗಿದೆ. ಪ್ರಕೃತ ಭಟರ ಮುಖಗಳೆಂಬ ಕಮಲಗಳು ಅರಳಲು ಶತ್ರುಸೈನಿಕರ ಮೇಲೆ ಆಗುತ್ತಿರುವ ಗದಾಪ್ರಹಾರ ಕಾರಣವಾದ್ದರಿಂದ, ಗದಾಪ್ರಹಾರಕ್ಕೆ ತುಷಾರ
ವನ್ನು ಹೋಲಿಕೆಯಾಗಿ ಕೊಡ ಲಾಗಿದೆ.) ಇನ್ನೊಂದೆಡೆ ಪ್ರಾಸ ಎಂಬ ಆಯುಧಗಳಿಂದ ಆಕ್ರಮ ಣಕ್ಕೆ ಒಳಗಾಗಿರುವ ಸೈನಿಕರು ಪುಡಿ-ಪುಡಿ ಆಗುತ್ತಿದ್ದರು. ಆ ಸೈನಿಕರ ನರಳಾಟ, ಚೀರಾಟ ಗಳನ್ನು ನೋಡಿದರೆ ಅತಿ ಭಯಂಕರವಾಗಿ ಕಾಣುತ್ತಿತ್ತು.’‘ಚಕ್ರಾಯುಧಗಳೆಂಬ ಗರಗಸದ ಹಲ್ಲಿಗೆ ಸಿಕ್ಕಿ ಎಷ್ಟೋ ಕುದುರೆಗಳು, ಮನುಷ್ಯರು, ಆನೆಗಳು ಕತ್ತರಿಸಿ ಬೀಳುತ್ತಿದ್ದವು. ಪರಶು ಎಂಬ ಆಯುಧಗಳ ಏಟಿನಿಂದ ಮದವೇರಿದ ಆನೆಗಳು ಕೆಳಕ್ಕೆ ಬೀಳುತ್ತಿದ್ದವು.’
‘ಮತ್ತೊಂದೆಡೆ ದೊಡ್ಡ ದೊಡ್ಡ ದೊಣ್ಣೆಗಳಿಂದ ಗೋವುಗಳನ್ನು ಬೆದರಿಸಿ ಚದುರಿಸಿದಂತೆ ಆಕ್ರಮಣಗಳು ಆಗುತ್ತಿದ್ದವು. ಅದು ಎಷ್ಟು ಭಯಂಕರವಾಗಿತ್ತೆಂದರೆ, ಭಟರು ಹಾರುತ್ತಾ ಹಾರುತ್ತಾ ಓಡಿ ಹೋಗುತ್ತಿದ್ದರು. ಓಡಿ ಹೋಗಿ ಮರ, ಗೋಡೆ, ಚರ್ಮ (ಚರ್ಮದಿಂದ ತಯಾರಿಸಿದ ಢಾಲು) ಮುಂತಾದವುಗಳಿಂದ ತಮ್ಮನ್ನು ಮುಚ್ಚಿಕೊಂಡು ರಕ್ಷಣೆ ಪಡೆಯುತ್ತಿದ್ದರು. ಕಲ್ಲುಗಳನ್ನು ಎಸೆಯುವ ಯಂತ್ರಗಳಿಂದ ಕಲ್ಲುಗಳು ಎಸೆಯಲ್ಪಡುತ್ತಿದ್ದವು. ಅದರ ಪ್ರಹಾರದಿಂದ ಮರದಂತೆ ಇರುವ ಎತ್ತರವಾಗಿರುವ ರಥಗಳ ಪತಾಕೆಗಳು ಪುಡಿ-ಪುಡಿಯಾಗಿ ಕೆಳಗೆ ಬೀಳುತ್ತಿದ್ದವು.’
‘ಖಡ್ಗಗಳ ಪ್ರಹಾರದಿಂದ ಬಿಳಿ ಕಮಲಗಳನ್ನು ತಲೆಯ ಮೇಲೆ ಧರಿಸಿರುವ ಛತ್ರಿಗಳ ಮೇಲ್ಭಾಗ ಕತ್ತರಿಸಿ ಬೀಳುತ್ತಿದ್ದವು. (ರಾಜರು ಧರಿಸಿರುವ ಮತ್ತು ಅನೇಕ ರಥಗಳ ಮೇಲೆ ಇರುವ ಛತ್ರಿಗಳು ಕಮಲಗಳಿಂದ ಅಲಂಕರಿಸಲ್ಪಟ್ಟಿದ್ದವು.) ಈ ರೀತಿಯಲ್ಲಿ ವಿವಿಧ ಆಯುಧಗಳ ಪ್ರಹಾರದಿಂದ ಸೇನೆಯು ಕ್ಷೀಣಗೊಳ್ಳುತ್ತಿತ್ತು. ಈ ಕ್ಷೋಭೆಯನ್ನು ಲಕ್ಷಿಸದೇ ಸೈನಿಕರು ಯುದ್ಧ ಮಾಡುತ್ತಲೇ ಇದ್ದರು.’
‘ಆ ಯುದ್ಧ ಎಷ್ಟು ಭಯಂಕರವಾಗಿತ್ತೆಂದರೆ ರಥದಲ್ಲಿರುವ ರಥನಾಯಕರನ್ನು (ರಥಿಕನನ್ನು ಅಥವಾ ಸಾರಥಿಯನ್ನು) ಜೀವ ಸಹಿತ ಹಿಡಿಯಲು ಸಪ್ತಸೇನೆಯ ಭಟರು ಜಿಗಿದು ಬರುತ್ತಿದ್ದರು. (ಎತ್ತರದ ಸ್ಥಳದಿಂದ ಅಥವಾ ಇನ್ನೊಂದು ರಥದಿಂದ ನೆಗೆದು ಹಾರಿ ಬರುತ್ತಿದ್ದರು.) ಹಾಗೆ ಹಾರಿ ಬರುತ್ತಿರುವವರು ಅಂತರಿಕ್ಷದಲ್ಲಿರುವಾಗಲೇ ಬಾಣಪ್ರಯೋಗದಿಂದ ಕೆಲವು ಚುರುಕಾದ ಸೈನಿಕರು ಅವರ ತಲೆ ಕಡಿದು ಹಾಕುತ್ತಿದ್ದರು. ಆಗ ತಲೆಯ ಭಾಗವಿಲ್ಲದ, ಕುತ್ತಿಗೆಯಿಂದ ಕೆಳಗಿನ ಶರೀರ (ಕಬಂಧ) ಗಳು ಹೋಗಿ ರಥನಾಯಕರನ್ನು ಅಪ್ಪಿಕೊಳ್ಳುತ್ತಿದ್ದವು. ಇದರಿಂದ ರಥನಾಯಕರು ಹತೋಟಿ ತಪ್ಪಿದ್ದರಿಂದ ರಥಗಳು ಎಲ್ಲೆಲ್ಲಿಯೋ ಚಲಿಸಿ ರಥದ ಪಕ್ಕದಲ್ಲಿರುವ ಪದಾತಿಗಳು ಘಾಸಿಗೊಳಗಾಗುತ್ತಿದ್ದರು.’