

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಬರುವ ಪ್ರಯಾಣಿಕರ ಅನುಕ್ಕಾಗಿ ಡಿ.೩೧ ರಂದು ನಮ್ಮ ಮೆಟ್ರೋ ರೈಲು ಸಂಚಾರವನ್ನು ಬಿಎಂಆರ್‌ಸಿಎಲ್ ಎರಡು ಗಂಟೆಗೂ ಹೆಚ್ಚು ಸಮಯ ವಿಸ್ತರಿಸಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಡಿ.೩೧ ರ ಮಧ್ಯರಾತ್ರಿ ೨ ರವರೆಗೆ ಮೆಟ್ರೋ ಸೇವೆ ಅವಧಿ ವಿಸ್ತರಿಸಲಾಗಿದೆ. ಮತ್ತೊಂದೆಡೆ ಎಂ.ಜಿ ರಸ್ತೆ ನಿಲ್ದಾಣವನ್ನು ರಾತ್ರಿ ೧೧ ರ ನಂತರ ತೆರೆಯದಂತೆ ಪೊಲೀಸ್ ಇಲಾಖೆ ಸೂಚಿಸಿದೆ.
ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಡಿ.೩೧ರ ರಾತ್ರಿ ೧೧ ರಿಂದ ೧೦ ನಿಮಿಷಕ್ಕೊಂದು ರೈಲು ಸೇವೆ ಇರಲಿದ್ದು, ಜನವರಿ ೧ ರ ಮುಂಜಾನೆ ೨ ಗಂಟೆಗೆ ಎಲ್ಲ ಮೆಟ್ರೋ ಟರ್ಮಿನಲ್ನಿಂದ ಕೊನೆ ರೈಲು ಹೊರಡಲಿದೆ. ಆದರೆ ಮೆಜೆಸ್ಟಿಕ್‌ನಿಂದ ಮುಂಜಾನೆ ೨.೪೦ಕ್ಕೆ ಕೊನೆ ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಪೇಪರ್ ಟಿಕೆಟ್ ವ್ಯವಸ್ಥೆ:
ಎಂ.ಜಿ ಮತ್ತು ಬಿಗ್ರೇಡ್ ರಸ್ತೆಯಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮುಗಿಸಿಕೊಂಡು ಎಲ್ಲರೂ ಒಟ್ಟೊಟ್ಟಿಗೆ ತಮ್ಮ ತಮ್ಮ ವಾಸಸ್ಥಳಕ್ಕೆ ತೆರಳು ಎಂ.ಜಿ ರಸ್ತೆಯ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲಿದ್ದು, ಭಾರೀ ಜನಸಂದಣಿಯಾಗಲಿದೆ. ಹೀಗಾಗಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಡಿ.೩೧ರ ರಾತ್ರಿ ೧೧ ಗಂಟೆಯ ನಂತರ ಪ್ರವೇಶ ಹಾಗೂ ನಿರ್ಗಮನ ದ್ವಾರ ಬಂದ್ ಆಗಲಿವೆ. ಸಂಭ್ರಮಾಚರಣೆ ಮುಗಿಸಿಕೊಂಡು ಮೆಟ್ರೋ ಮೂಲಕ ಹೋಗಬೇಕಿರುವವರು ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ ಹೋಗಬೇಕು. ಬಳಿಕ ಮೆಜೆಸ್ಟಿಕ್‌ನಲ್ಲಿ ಮೆಟ್ರೋ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಡಿ.೩೧ ರಂದು ಮುಂಗಡವಾಗಿ ಐವತ್ತು ರೂಪಾಯಿಯ ರಿಟರ್ನ್ ಪೇಪರ್ ಟಿಕೆಟ್ ಪಡೆದು ಹೋಗಲು ವ್ಯವಸ್ಥೆ ಮಾಡಲಾಗಿದೆ. ಟಿಕೆಟ್ ಪಡೆದುಕೊಳ್ಳಲು ನೂಕುನುಗ್ಗಲು ಆಗುವುದರಿಂದ ಈ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಪೇಪರ್ ಟಿಕೆಟ್ ಬೇಗ ಬೇಗ ಹರಿದು ಕೊಡಬಹುದು. ಯಾವುದೇ ಸ್ಕ್ಯಾನ್ ಮಾಡುವ ತಾಪತ್ರಯ ಇರುವುದಿಲ್ಲ. ಇದರಿಂದ ಜನಸಂದಣೆಯೂ ಆಗುವುದಿಲ್ಲ.