ನೆಟ್‌ವರ್ಕ್ ಸೇವೆ ಗ್ರಾಮೀಣ ಭಾಗಕ್ಕೂ ವಿಸ್ತರಿಸಿ: ಡಿಸಿ ಸೂಚನೆ

dc
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸೇವೆ ಒದಗಿಸುವ ಕುರಿತು ವಿವಿಧ ಕಂಪನಿಗಳ ಪ್ರಮುಖರೊಂದಿಗೆ ಡಿಸಿ ಗುರುದತ್ತ ಹೆಗಡೆ ಶುಕ್ರವಾರ ಸಭೆ ನಡೆಸಿದರು.
Published on

ಶಿವಮೊಗ್ಗ: ಮೊಬೈಲ್ ನೆಟ್‌ವರ್ಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ನಗರ, ಪಟ್ಟಣ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಭಾಗಕ್ಕೂ ಸೇವಾ ಕ್ಷೇತ್ರವನ್ನು ವಿಸ್ತರಿಸಿಕೊಳ್ಳಬೇಕು. ಇದಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಭರವಸೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಬಿಎಸ್‌ಎನ್‌ಎಲ್ ಟವರ್‌ಗಳು ಕಾರ್ಯನಿರ್ವಹಿಸುತ್ತಿದ್ದರೂ ಸರಿಯಾಗಿ ಸಿಗ್ನಲ್ ದೊರೆಯದ ಕಾರಣ ಖಾಸಗಿ ಕಂಪನಿಗಳೊಂದಿಗೆ ಸಭೆ ನಡೆಸಿ ಗ್ರಾಮೀಣ ಭಾಗದಲ್ಲಿ ಅವರ ಸೇವೆ ದೊರೆಯುವಂತೆ ಮಾಡಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಸೂಚಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಖಾಸಗಿ ನೆಟ್‌ವರ್ಕ್ ಕಂಪನಿ ಪ್ರಮುಖರೊಂದಿಗೆ ಸಭೆ ನಡೆಸಿದರು.

ಗ್ರಾಮೀಣ ಭಾಗದ ಮನೆಯಿಂದಲೇ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಯುವಜನರಿಗೆ ಮೊಬೈಲ್ ಸಿಗ್ನಲ್ ಸರಿಯಾಗಿ ಸಿಗದಿರುವುದು ದೊಡ್ಡ ಸಮಸ್ಯೆಯಾಗಿದೆ. ಗ್ರಾಮಾಂತರ ಭಾಗದಲ್ಲಿ ತುರ್ತು ಸಂದರ್ಭದ ವೇಳೆ ಸಂವಹನಕ್ಕೆ ಮೊಬೈಲ್ ಸೇವೆ ಎಲ್ಲ ಕಡೆ ಸಿಗುತ್ತಿಲ್ಲ. ಹೀಗಾಗಿ ಕಂಪನಿಗಳು ಗ್ರಾಮೀಣ ಭಾಗದತ್ತ ಮುಖ ಮಾಡಬೇಕೆಂದು ಡಿಸಿ ತಿಳಿಸಿದರು.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಈಗಾಗಲೆ ಗುರುತಿಸಿರುವ ಕಡೆ ಸೇವೆ ನೀಡಲು ಏರ್‌ಟೆಲ್, ಜಿಯೋ ಸೇರಿ ವಿವಿಧ ಕಂಪನಿಗಳು ಮುಂದೆ ಬಂದರೆ ಜಿಲ್ಲಾಡಳಿತದಿಂದ ಭೂಮಿ, ವಿದ್ಯುತ್ ಮತ್ತಿತರ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.

ಸಣ್ಣಪುಟ್ಟ ನ್ಯೂನತೆಗಳ ನಡುವೆಯೂ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿವಿಧ ಕಂಪನಿಗಳ ನೆಟ್‌ವರ್ಕ್ ಸೇವೆ ಒದಗಿಸಲಾಗುತ್ತಿದೆ. ಅಂತೆಯೇ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಸೇವೆ ಒದಗಿಸುವ ಬಗ್ಗೆ ಇರುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸಬೇಕು ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕಂಪನಿಗಳ ನಿರ್ವಹಣಾಧಿಕಾರಿಗಳು, ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಸ್ಥಾವರಗಳ ನಿರ್ಮಾಣಕ್ಕೆ ಸೂಕ್ತ ನಿವೇಶನ ಒದಗಿಸಬೇಕು. ಕೆಲವು ಪ್ರದೇಶಗಳಲ್ಲಿ ಸ್ಥಾವರಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಿ, ಅನುಮೋದನೆಗಾಗಿ ಪ್ರಸ್ತಾವನೆಯನ್ನು ನಮ್ಮ ಕಂಪನಿಯ ಮುಖ್ಯಸ್ಥರಿಗೆ ಕಳುಹಿಸಿದ್ದೇವೆ. ಅಲ್ಲಿ ಅನುಮೋದನೆ ಸಿಕ್ಕ ಬಳಿಕ ಜಿಲ್ಲಾಡಳಿತದ ಸಹಕಾರ ಕೋರುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net