

ಅಭಿವ್ಯಕ್ತಿ ಎಂದರೆ ಇತರರ ಬಗೆಗಿನ ನಮ್ಮ ಅನಿಸಿಕೆಗಳನ್ನು ಅಭಿಪ್ರಾಯಗಳನ್ನು ಭಾವನೆಗಳನ್ನು ಪ್ರಕಟಪಡಿಸುವುದು ಇಲ್ಲವೇ ವ್ಯಕ್ತಪಡಿಸುವುದು ಎಂದರ್ಥ. ಅದರಲ್ಲೂ ಇತರರು ಪ್ರಶಂಸನೀಯ, ಗಣನೀಯ ಕೆಲಸಗಳನ್ನು ಮಾಡಿದಾಗ ಇಲ್ಲವೇ ಸಾಧನೆಗೈದಾಗ ಒಂದಿಷ್ಟು ಮೆಚ್ಚುಗೆ ಮಾತುಗಳನ್ನು ಸಕಾಲದಲ್ಲಿ ಸಂತೋಷದಿಂದ ಸಮ ಪ್ರಮಾಣದಲ್ಲಿ ವ್ಯಕ್ತಪಡಿಸದಿದ್ದರೆ ಅದೊಂದು ಲೋಪವೆಂದೆನಿಸುತ್ತದೆ. ಮಾನವೀಯ ಸಂಬಂಧಗಳು ಹಸನಾಗಿರಬೇಕಾದರೆ, ಹಸಿರಾಗಿರಬೇಕಾದರೆ ಪರಸ್ಪರರ ನಡುವೆ ಸದ್ಭಾವನೆಗಳು, ಸದಭಿಪ್ರಾಯಗಳು, ಪ್ರೀತಿ-ವಿಶ್ವಾಸಗಳು ಸೃಷ್ಟಿಯಾಗಿ ವೃದ್ಧಿಯಾಗುತ್ತಿರಬೇಕು. ಹೀಗಾಗಲು ವ್ಯಕ್ತಿಗಳಲ್ಲಿನ ಒಳಿತನ್ನು, ಗುಣವಿಶೇಷಗಳನ್ನು, ಸದ್ಗುಣಗಳನ್ನು, ಸಾಧನೆಗಳನ್ನು ಬರೀ ಗುರುತಿಸಿದರೆ ಸಾಲದು. ಅವನ್ನು ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಮನಸಾರೆ ಅಭಿವ್ಯಕ್ತಿಗೊಳಿಸುವುದು ಕೂಡ ಅಷ್ಟೇ ಮುಖ್ಯ. ಅಭಿವ್ಯಕ್ತಿಯಿಂದ ಮಾತ್ರ ಭಾವನೆಗಳು, ಸದಭಿಪ್ರಾಯಗಳು, ಮೆಚ್ಚುಗೆಗಳು ಇನ್ನೊಬ್ಬರಿಗೆ ತಿಳಿಯಲು ಸಾಧ್ಯ.
ಈ ವಿಚಾರದಲ್ಲಿ ಮಾತ್ರ ಹೆಚ್ಚಿನವರು ಕಂಜೂಸುಗಳೇ. ಮಡದಿ ರುಚಿ ರುಚಿಯಾದ ಅಡುಗೆ ಮಾಡಿದಾಗ ಅದನ್ನು ಮೂರು ಮೂರು ಸಲ ಹಾಕಿಸಿಕೊಂಡು ತಿನ್ನುವ ಗಂಡನ ಬಾಯಿಂದ ಒಂದು ಮೆಚ್ಚುಗೆಯ ಶಬ್ದ ಹೊರಡುವುದೇ ಇಲ್ಲ! ಆಕೆ ಒಳ್ಳೆಯ ಸೀರೆಯನ್ನು ಉಟ್ಟುಕೊಂಡು ಅಂದವಾಗಿ ಕಂಡಾಗಲೂ ‘ಚೆನ್ನಾಗಿ ಕಾಣ್ತಾ ಇದ್ದೀಯ’ ಎಂಬ ಮೆಚ್ಚುಗೆಯ ಮಾತು ಆಚೆಗೆ ಬರುವುದೇ ಇಲ್ಲ. ಹೀಗೆ ಹೇಳಿದ್ದರೆ ಅವನ ಗಂಟೇನೂ ಹೋಗುತ್ತಿರಲಿಲ್ಲ. ಬದಲಾಗಿ ಆಕೆಗೆ ಪುಕ್ಕಟೆಯಾಗಿ ಒಂದಿಷ್ಟು ಸಂತೋಷವನ್ನು ನೀಡಿದಂತಾಗುತ್ತಿತ್ತು. ಇಂತಹ ವರ್ತನೆಗೆ ಏನೋ ಒಂದು ಒಣ ಬಿಗುಮಾನ ಕಾರಣವಾದರೆ, ಇನ್ನೊಂದು ಹೃದಯ ವೈಶಾಲ್ಯದ ಅಭಿವ್ಯಕ್ತಿಯ ಕೊರತೆ. ಇದನ್ನು ಮೌನದಿಂದ ದುಃಖದೊಡನೆ ವರುಷಗಳಿಂದ ಅನುಭವಿಸಿದ ಪತ್ನಿ ಒಂದೊಮ್ಮೆ ತವರುಮನೆಗೆ ಹೋದಾಗ ಗಂಡನಿಗೆ ಹೀಗೊಂದು ಪತ್ರವನ್ನು ಬರೆಯುತ್ತಾಳೆ.
‘ರೀ. ನನ್ನ ಪಾಲಿಗೆ ನೀವೇ ನನ್ನ ದೇವರು; ನೀವೇ ನನ್ನ ಸರ್ವಸ್ವ. ಈ ವಿಚಾರ ನಿಮಗೂ ಗೊತ್ತು! ನಿಮ್ಮ ಸಂತೋಷಕ್ಕಾಗಿ ನಾನು ರುಚಿ ರುಚಿಯಾದ ಅಡುಗೆ ಮಾಡುತ್ತೇನೆ. ನಿಮ್ಮ ಖುಷಿಗಾಗಿ ಸಿಂಗರಿಸಿಕೊಳ್ಳುತ್ತೇನೆ. ನಿಮ್ಮ ಬರುವನ್ನೇ ಕಾಯುತ್ತಿರುತ್ತೇನೆ. ಆದರೆ ನಿಮ್ಮ ಬಾಯಿಯಿಂದ ಒಂದೂ ಒಳ್ಳೆಯ ಮೆಚ್ಚುಗೆಯ ಮಾತು ಬರುವುದೇ ಇಲ್ಲ. ಬೇರೆ ಯಾರು ಹೇಳಿದರೂ ನನಗೆ ಅದು ಮುಖ್ಯವಲ್ಲ. ನಿಮ್ಮ ಪ್ರಶಂಸೆ ನನಗೆ ಹಂಡೆ ಹಾಲನ್ನು ಕುಡಿದಷ್ಟು ಸಂತೋಷವನ್ನು ಕೊಟ್ಟೀತು... ಆದರೆ ನೀವಾದರೋ ಆ ಕೆಲಸವನ್ನು ಮಾಡಲೇ ಇಲ್ಲ. ಅಂದಮೇಲೆ ನಿಮ್ಮೊಲವು ನನ್ನ ಅನುಭವಕ್ಕೆ ಹೇಗೆ ಬರಬೇಕು ಹೇಳಿ? ಅಪರೂಪಕ್ಕಾದರೂ ನೀವು ನನ್ನನ್ನು ತಬ್ಬಿಕೊಂಡು ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಿದ್ದರೆ ನನಗೆಷ್ಟು ಸಂತೋಷ ವಾಗುತ್ತಿತ್ತು! ನಿಮ್ಮಿಂದ ನಾನು ಬೆಲೆಬಾಳುವ ಸೀರೆಗಳನ್ನಾಗಲೀ ಚಿನ್ನಾಭರಣಗಳನ್ನಾಗಲೀ ಬಯಸುವುದಿಲ್ಲರೀ.
ಒಂದು ಒಳ್ಳೆಯ ಮೆಚ್ಚುಗೆಯ ಮಾತು; ಪ್ರೀತಿಯ ಆಲಿಂಗನ ಅಷ್ಟೇ!, ಇಷ್ಟನ್ನು ಕೊಡಲು ನಿಮ್ಮಿಂದ ಸಾಧ್ಯವಾಗುವುದಿಲ್ಲವೇ? ಭಾವ ಭಾವನೆಗಳಿಲ್ಲದ ದಾಂಪತ್ಯದಲ್ಲಿ ಯಾವ ಸುಖ ಇದೆ ಹೇಳಿ! ಇಂತೀ ನಿಮ್ಮ ಬಗ್ಗೆಯೇ ಯೋಚಿಸುತ್ತಿರುವ ನಿಮ್ಮ ಪ್ರೀತಿಗಾಗಿಯೇ ಹಗಲಿರುಳೂ ಕಾಯುತ್ತಿರುವ ನಿಮ್ಮ ಮಡದಿ. ಈ ಪತ್ರವನ್ನೇ ಚೆನ್ನವೀರ ಕಣವಿಯವರು ಹೀಗೆ ಬರೆಯುತ್ತಾರೆ. ‘ಮೌನ ಮೊಗ್ಗೆಯನೊಡೆದು, ಮಾತು ಅರಳಿ ಬರಲಿ, ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ.’ಆದುದರಿಂದ ಅಭಿವ್ಯಕ್ತಿ ಎಂಬ ಕರ್ತವ್ಯದಿಂದ ನಾವು ವಿಮುಖವಾಗಬಾರದು ಹಾಗೂ ಇತರರನ್ನು ವಂಚಿತರನ್ನಾಗಿ ಮಾಡಬಾರದು. ಒಂದು ಸಮಾರಂಭದಲ್ಲಿ ಒಬ್ಬರು ಚೆನ್ನಾಗಿ ಮಾತನಾಡಿದಾಗ, ಇಲ್ಲವೇ ಸುಶ್ರಾವ್ಯವಾಗಿ ಹಾಡಿದಾಗ, ಪಕ್ಕದ ಮನೆಯ ಹುಡುಗ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಾಗ, ಪರಿಚಿತರ ಮಗಳಿಗೆ ಒಳ್ಳೆಯ ಕಡೆ ಮದುವೆ ನಿಶ್ಚಯವಾದಾಗ, ಆಪ್ತರ ಮಗನಿಗೆ ನೌಕರಿ ದೊರೆತಾಗ ನಾವೇಕೆ ಮೌನವಾಗಿರುತ್ತೇವೆ?
ಇದು ಸಭ್ಯತೆಯೂ ಅಲ್ಲ, ಸೌಜನ್ಯವೂ ಅಲ್ಲ! ಹಾಗೆಂದು ಒಳಗಿಂದೊಳಗೆ ನಮಗೂ ಸಂತೋಷವಾಗಿರುತ್ತದೆ. ಆದರೆ ಅದನ್ನು ವ್ಯಕ್ತಪಡಿಸುವುದಿಲ್ಲ. ಇದು ತರವಲ್ಲ. ಅಭಿವ್ಯಕ್ತಿಯು ಪರಸ್ಪರ ಪ್ರೀತಿ ವಿಶ್ವಾಸಗಳನ್ನು ವೃದ್ಧಿಪಡಿಸುತ್ತದೆ. ಸಂಬಂಧಗಳನ್ನು ಬಲಗೊಳಿಸುತ್ತದೆ. ಹಾಗೆಂದು ಅಭಿವ್ಯಕ್ತಿಯು ಮುಖಸ್ತುತಿಯಾಗಿರಬಾರದು. ಉತ್ಪ್ರೇಕ್ಷೆಯಾಗಿರಬಾರದು. ಸಹಜ ಸ್ವಾಭಾವಿಕವಾಗಿರಲಿ. ಅಂತೆಯೇ ಮಾತುಗಳೇ ಅಭಿವ್ಯಕ್ತಿಯ ಮಾಧ್ಯಮವಾಗಬೇಕೆಂದಿಲ್ಲ; ಕೃತಿಗಳೂ ಈ ಕೆಲಸವನ್ನು ಮಾಡಬಲ್ಲವು. ಒಳ್ಳೆಯ ಕೆಲಸವನ್ನು ಮಾಡಿದ ಮಡದಿಗೆ ನೀಡುವ ಒಂದು ಮುತ್ತು, ಒಳ್ಳೆಯ ಅಂಕಗಳನ್ನು ಪಡೆದ ಮಕ್ಕಳಿಗೆ ನೀಡುವ ಒಂದು ಮೆಚ್ಚುಗೆ, ಸಾಧಕರನ್ನು ಅಭಿನಂದಿಸಿ ಬರೆಯುವ ನಾಲ್ಕು ಸಾಲುಗಳು, ಶುಭಾಶಯಗಳು ಇದೇ ಸತ್ಪರಿಣಾಮವನ್ನು ಬೀರುತ್ತವೆ.