ಭಾರತದ ಲಸಿಕೆಗೆ ಮಾನ್ಯತೆ; ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆ 96 ದೇಶಗಳ ಮನ್ನಣೆ

national 03
Published on

ನವದೆಹಲಿ: ಭಾರತದಲ್ಲಿ ಉತ್ಪಾದಿಸಲಾಗುತ್ತಿರುವ ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡಲು ಈವರೆಗೆ 96 ದೇಶಗಳು ಒಪ್ಪಿದ್ದು, ಈ ಕುರಿತು ಭಾರತದ ಜತೆ ಒಪ್ಪಂದ ಮಾಡಿಕೊಂಡಿವೆ. ಪರಸ್ಪರರ ದೇಶಗಳಿಗೆ ಪ್ರಯಾಣ ಸುಗಮಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಮಂಗಳವಾರ ತಿಳಿಸಿದ್ದಾರೆ.

ಜಗತ್ತಿನ ಅತಿ ದೊಡ್ಡ ಕೋವಿಡ್ ಲಸಿಕೆ ಅಭಿಯಾನ ಕಾರ್ಯಕ್ರಮದ ಫಲಾನುಭವಿಗಳನ್ನು ವಿಶ್ವದ ಇತರ ರಾಷ್ಟ್ರಗಳು ಮಾನ್ಯ ಮಾಡಬೇಕೆಂಬ ನಿಟ್ಟಿನಲ್ಲಿ ಭಾರತ ಸರ್ಕಾರ ಸತತ ಪ್ರಯತ್ನ ನಡೆಸುತ್ತಿದೆ ಎಂದು ಮಾಂಡವೀಯ ಹೇಳಿದ್ದಾರೆ. ಪ್ರಯಾಣ, ಶಿಕ್ಷಣ, ವ್ಯಾಪಾರ-ವಹಿವಾಟು ಮತ್ತು ಪ್ರವಾಸೋದ್ಯಮ ಸುಗಮವಾಗುವಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ. ವಿದೇಶಕ್ಕೆ ಪ್ರಯಾಣಿಸುವ ಉದ್ದೇಶ ಹೊಂದಿದವರು ಅಂತಾರಾಷ್ಟ್ರೀಯ ಪ್ರಯಾಣ ಲಸಿಕೆ ಸರ್ಟಿಫಿಕೆಟ್​ಅನ್ನು ಕೋವಿನ್ ಪೋರ್ಟಲ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬಹುದು.

ಬ್ರಿಟನ್ ಲಸಿಕೆ ಪಟ್ಟಿಗೆ ಕೊವ್ಯಾಕ್ಸಿನ್

ಭಾರತದ ಕೊವ್ಯಾಕ್ಸಿನ್ ಲಸಿಕೆಯನ್ನು ಅಂತಾ ರಾಷ್ಟ್ರೀಯ ಪ್ರಯಾಣಿಕರಿಗೆ ಮಾನ್ಯ ಮಾಡುವ ನಿಟ್ಟಿನಲ್ಲಿ ನವೆಂಬರ್ 22ರಿಂದ ಅನುಮೋದಿತ ವ್ಯಾಕ್ಸಿನ್ ಪಟ್ಟಿಯಲ್ಲಿ ಸೇರಿಸಲು ಬ್ರಿಟನ್ ಸರ್ಕಾರ ಸಮ್ಮತಿಸಿದೆ. ಹೈದರಾಬಾದ್​ನ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಮೇಡ್ ಇನ್ ಇಂಡಿಯಾ ಲಸಿಕೆ ಕೊವ್ಯಾಕ್ಸಿನ್​ನ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿರುವ ಬೆನ್ನಲ್ಲೇ ಬ್ರಿಟನ್ ಈ ನಿರ್ಧಾರಕ್ಕೆ ಬಂದಿದೆ. ಕೊವ್ಯಾಕ್ಸಿನ್ ಪಡೆದವರು ಇಂಗ್ಲೆಂಡ್​ಗೆ ಬಂದಾಗ ಸ್ವಯಂ-ಕ್ವಾರಂಟೈನ್​ಗೆ ಒಳಪಡುವ ಅಗತ್ಯವಿಲ್ಲ. ಭಾರತದಲ್ಲಿ ತಯಾರಾಗುವ ಆಕ್ಸ್ ಫರ್ಡ್-ಅಸ್ಟ್ರಾಜೆನಿಕಾದ ಲಸಿಕೆ ಕೋವಿಶೀಲ್ಡ್​ನ್ನು ಬ್ರಿಟನ್ ಕಳೆದ ತಿಂಗಳು ಅನುಮೋದಿತ ಪಟ್ಟಿಗೆ ಸೇರಿಸಿತ್ತು. ಭಾರತದಲ್ಲಿ ಕೋವಿಶೀಲ್ಡ್​ನೊಂದಿಗೆ ಕೊವ್ಯಾಕ್ಸಿನ್ ಲಸಿಕೆ ಹೆಚ್ಚು ವ್ಯಾಪಕವಾಗಿ ಬಳಸಲಾಗು ತ್ತಿದೆ. ಕೊವ್ಯಾಕ್ಸಿನ್​ನ ಎರಡೂ ಡೋಸ್ ಪಡೆದವರು ನವೆಂಬರ್ 22ರಿಂದ ಬ್ರಿಟನ್​ಗೆ ಪ್ರಯಾಣಿಸಲು ಅಡ್ಡಿಯಿಲ್ಲ. ಕೋವಿಶೀಲ್ಡ್ ಪಡೆದವರಂತೆ ಅವರನ್ನು ಪರಿಗಣಿಸಲಾಗುತ್ತದೆ ಎಂದು ಭಾರತದಲ್ಲಿ ಬ್ರಿಟಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಕನಿಷ್ಠ ಕೇಸ್

ದೇಶದಲ್ಲಿ ಕರೊನಾ ಕೇಸ್​ಗಳು ಗಣನೀಯ ಪ್ರಮಾಣದಲ್ಲಿ ತಗ್ಗುತ್ತಿದ್ದು ಮಂಗಳವಾರ 10,126 ಹೊಸ ಕೇಸ್​ಗಳು ಪತ್ತೆಯಾಗಿವೆ. ಇದು 266 ದಿನಗಳಲ್ಲಿ ಅತ್ಯಂತ ಕಡಿಮೆ ಪ್ರಕರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಸೋಂಕಿನ ಒಟ್ಟು ಪ್ರಕರಣ 3,43,77,113ಕ್ಕೆ ಏರಿದೆ. 332 ರೋಗಿಗಳು ಮೃತಪಡುವುದರೊಂದಿಗೆ ಸಾವಿನ ಸಂಖ್ಯೆ 4,61,389ಕ್ಕೆ ತಲುಪಿದೆ. ರಾಷ್ಟ್ರೀಯ ಚೇತರಿಕೆ ದರ ಶೇಕಡ 98.25 ಆಗಿದೆ. 2020ರ ಮಾರ್ಚ್ ನಂತರ ಇದು ಅತ್ಯಂತ ಗರಿಷ್ಠ ಚೇತರಿಕೆ ದರವಾಗಿದೆ ಎಂದು ಸಚಿವಾಲಯ ವಿವರಿಸಿದೆ.

ವರ್ಷಾಂತ್ಯದೊಳಗೆ ಎಲ್ಲರಿಗೂ ಲಸಿಕೆ ಅಸಾಧ್ಯ

ಡಿಸೆಂಬರ್ 31ರೊಳಗೆ ಭಾರತದ ಎಲ್ಲ ವಯಸ್ಕರಿಗೆ ಕೋವಿಡ್ ಲಸಿಕೆ ಹಾಕಲು ಸಾಧ್ಯವಾಗದು. ಆದರೆ, ‘ಎಲ್ಲರಿಗೂ ಬೇಕಾಗುವಷ್ಟು’ ಲಸಿಕೆ ಡೋಸ್ ದೇಶದಲ್ಲಿ ಲಭ್ಯವಿರಲಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 74 ಕೋಟಿಗೂ ಅಧಿಕ ವಯಸ್ಕರು ಇದುವರೆಗೆ ಪ್ರಥಮ ಡೋಸ್ ಪಡೆದಿದ್ದಾರೆ. 35 ಕೋಟಿ ಜನರು ಎರಡೂ ಡೋಸ್ ಪಡೆದಿದ್ದಾರೆ. ದೇಶದಾದ್ಯಂತ ಒಟ್ಟು 109 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ. ಎಲ್ಲ ವಯಸ್ಕರಿಗೆ ಲಸಿಕೆ ಹಾಕಲು ಅಂತಿಮವಾಗಿ 188 ಕೋಟಿ ಡೋಸ್ ಅಗತ್ಯವಾಗಿದೆ. ‘ಲಸಿಕೆ ಲಭ್ಯತೆ ಒಂದು ಪ್ರಶ್ನೆಯಲ್ಲ. ನಾವು ವ್ಯಾಕ್ಸಿನ್ ರಫ್ತು ಮಾಡಲೂ ಆರಂಭಿಸಿದ್ದೇವೆ. ಲಭ್ಯವಿರುವ ಲಸಿಕೆ ಪಡೆಯಲು ಜನರು ಮುಂದೆ ಬರಬೇಕು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಭಿಯಾನಕ್ಕೆ ವೇಗ ನೀಡುವ ಸಲುವಾಗಿ ಮನೆ-ಮನೆಗೆ ತೆರಳಿ ಲಸಿಕೆ ನೀಡಲು ‘ಹರ್ ಘರ್ ದಸ್ತಕ್’ ಕಾರ್ಯಕ್ರಮವನ್ನು ಸರ್ಕಾರ ಈಗಾಗಲೇ ಆರಂಭಿಸಿದೆ.

ಸಿಎ ಪರೀಕ್ಷೆಗೆ ಕರೊನಾ ನಿಯಮ ಪಾಲನೆ

ಲೆಕ್ಕ ಪರಿಶೋಧನೆ (ಸಿಎ) ಪರೀಕ್ಷೆಗಳಿಗೆ ಹಾಜರಾಗಬಯಸುವ ಅಭ್ಯರ್ಥಿಗಳು ಪೋಷಕರ ಅನುಮತಿ ಪತ್ರ ತರಬೇಕು ಎಂದು ಭಾರತ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಸೂಚಿಸಿದೆ. ಹೆಚ್ಚು ಜ್ವರವಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದೂ ಅದು ಪ್ರಕಟಿಸಿದೆ. ಕೋವಿಡ್-19 ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಕಠಿಣ ನಿಯಂತ್ರಣ ಕ್ರಮಗಳೊಂದಿಗೆ ಡಿಸೆಂಬರ್​ನಲ್ಲಿ ಫೌಂಡೇಷನ್, ಇಂಟರ್ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಿಎ ಪರೀಕ್ಷೆಗಳನ್ನು ಐಸಿಎಐ ನಡೆಸಲಿದೆ. ಜ್ವರ ಮತ್ತು ಶಂಕಿತ ಕೋವಿಡ್ ಪ್ರಕರಣದ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಐಸಿಎಐ ಮಾರ್ಗಸೂಚಿ ತಿಳಿಸಿದೆ.

ಮಾಹಿತಿ ಕೊಟ್ಟವರಿಗೆ 15,500 ಡಾಲರ್!

ಚೀನಾದಲ್ಲಿ ಇತ್ತೀಚೆಗೆ ಉಲ್ಬಣಿಸಿರುವ ಕರೊನಾ ಮಹಾಮಾರಿಯ ಮೂಲವನ್ನು ತಿಳಿಸಿದವರಿಗೆ 15,500 ಡಾಲರ್ (1 ಲಕ್ಷ ಯುವಾನ್) ಬಹುಮಾನ ಕೊಡುವುದಾಗಿ ಹೀಹೆ ನಗರದ ಅಧಿಕಾರಿಗಳು ಪ್ರಕಟಿಸಿದ್ದಾರೆ. ಈ ನಗರ ರಷ್ಯಾದೊಂದಿಗೆ ಗಡಿ ಹೊಂದಿದ್ದು ಸೋಂಕು ಉಲ್ಬಣಿಸಿರುವುದರಿಂದ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ನಿಯಂತ್ರಣ ಕ್ರಮಕ್ಕೆ ಮುಂದಾಗಿದ್ದಾರೆ. ಚೀನಾದ ನಾನಾ ಪ್ರಾಂತ್ಯಗಳ 40ಕ್ಕೂ ಹೆಚ್ಚು ನಗರಗಳಲ್ಲಿ ಕೋವಿಡ್ ವ್ಯಾಧಿ ಉಲ್ಬಣಿಸುತ್ತಿರುವುದು ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ರಷ್ಯಾದಲ್ಲಿ ದಾಖಲೆಯ ದೈನಿಕ ಮರಣ

ರಷ್ಯಾದಲ್ಲಿ ಮತ್ತೊಮ್ಮೆ ಕರೊನಾ ಸಂಬಂಧಿತ ಸಾವಿನಲ್ಲಿ ಹೆಚ್ಚಳ ಆಗಿದ್ದು ಅನಪೇಕ್ಷಿತ ದಾಖಲೆ ಸೃಷ್ಟಿಯಾಗಿದೆ. ಮಂಗಳವಾರ ಬೆಳಿಗ್ಗೆ ವರೆಗೆ ದೇಶದಲ್ಲಿ 1,211 ರೋಗಿಗಳು ಮೃತಪಟ್ಟಿದ್ದಾರೆ. ಇದು ಸಾಂಕ್ರಾ ಮಿಕತೆ ಸ್ಪೋಟಗೊಂಡಾಗಿನಿಂದ ರಷ್ಯಾದಲ್ಲಿ ಸಂಭವಿಸಿದ ಅತ್ಯಧಿಕ ದೈನಿಕ ಮರಣವಾಗಿದೆ. ಒಂದೇ ದಿನ 39,160 ಹೊಸ ಕೇಸ್​ಗಳು ದೃಢ ಪಟ್ಟಿವೆ ಎಂದು ರಾಷ್ಟ್ರೀಯ ಕರೊನಾ ವೈರಸ್ ಕಾರ್ಯಪಡೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net