ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ: ಕಾಂಗ್ರೆಸ್​ ವಿರುದ್ಧ ವಿಜಯೇಂದ್ರ ಆಕ್ರೋಶ

b y v
Published on

ಬೆಂಗಳೂರು: ಬೆಂಗಳೂರಿನ ಟೆಕ್ ಕಾರಿಡಾರ್ ಎಂದೇ ಜನಪ್ರಿಯ ಅಗಿರುವ ಮಾರತ್‌ಹಳ್ಳಿ, ಹಾಗೂ ವೈಟ್ ಫೀಲ್ಡ್‌ನ ಸಮೀಪವಿರುವ ಕುಂದಲಹಳ್ಳಿ ಸಮೀಪ ಹೋಟೆಲ್​ ಒಂದರಲ್ಲಿ ಸ್ಫೋಟಗೊಂಡು ಮೂವರು ಸಿಬ್ಬಂದಿ ಸೇರಿ ಐದು ಜನರು ಗಂಭೀರ ಗಾಯಗೊಂಡಿರುವ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ಟೀಟ್​ ಮಾಡಿರುವ ವಿಜಯೇಂದ್ರ ರಾಜ್ಯ ಕಾಂಗ್ರೆಸ್​ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಘಟನೆ ರಾಜಧಾನಿಯ ಜನರನ್ನು ಬೆಚ್ಚಿಬೀಳಿಸಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಕಿಡಿಕಾಡಿದ್ದಾರೆ.

ಕೊಲೆ, ಸುಲಿಗೆ, ಗೂಂಡಾಗಿರಿ, ಮಹಿಳಾ ದೌರ್ಜನ್ಯಗಳು ಸರಣೀ ರೂಪದಲ್ಲಿ ವರದಿಯಾಗುತ್ತಲೇ ಇವೆ, ದೇಶ ಕಂಟಕ ಶಕ್ತಿಗಳು ವಿಧಾನ ಸೌಧದೊಳಗೇ ಬಂದು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗುವಷ್ಟರ ಮಟ್ಟಿಗೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದೀಗ ಜನನಿಬಿಡ ಹೋಟೆಲ್ ಪ್ರವೇಶಿಸಿ ಬಾಂಬ್ ಸ್ಫೋಟಿಸಿ ಅಮಾಯಕರನ್ನು ಗಾಯಗೊಳಿಸಿ ತೀವ್ರ ಆತಂಕದ ವಾತಾವರಣ ಸೃಷ್ಟಿಸಿದೆ ಎಂದು ಟೀಕಿಸಿದ್ದಾರೆ.

ಸುಭದ್ರ ಕರ್ನಾಟಕಕ್ಕೆ ಗಂಡಾಂತರದ ಆತಂಕ ತರುವ ಚಟುವಟಿಕೆಗಳನ್ನು ಬಗ್ಗುಬಡಿಯುವಲ್ಲಿ ಮೀನಾಮೇಷ ಎಣಿಸುತ್ತಾ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ಲೆಕ್ಕಾಚಾರದ ಹೆಜ್ಜೆಗಳ ದಾರಿ ಬದಲಿಸಿಕೊಳ್ಳದೇ ಹೋದರೆ ಅಧಿಕಾರದಿಂದ ಕೆಳಗಿಳಿಸಿ ವಿಧಾನ ಸೌಧದಿಂದ ಹೊರ ಕಳಿಸುವ ದಾರಿ ತೋರಿಸುವ ಹೋರಾಟ ಬಿಜೆಪಿ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯ ಅವರು ಸಹ ಸುಧಾರಿತ ಸ್ಫೋಟಕ ಬ್ಲಾಸ್ಟ್ ಆಗಿರೋದನ್ನು ಖಚಿತಪಡಿಸಿದ್ದಾರೆ. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net