

ಬೆಂಗಳೂರು: ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಆರು ತಿಂಗಳೊಳಗೆ ಇತ್ಯರ್ಥಪಡಿಸಬೇಕು(AC Cases pending in courts should be disposed of within six months). ಇಲ್ಲದೇ ಹೋದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ(Krishna Bairegowda) ಎಚ್ಚರಿಸಿದರು.
ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಅವರು, ಅವಧಿ ಮೀರಿ ಬಾಕಿ ಇರುವ ಎಲ್ಲ ಪ್ರಕರಣಗಳನ್ನೂ ಆರು ತಿಂಗಳಲ್ಲಿ ಇತ್ಯರ್ಥಗೊಳಿಸಬೇಕು ಎಂದು ಗಡುವು ನಿಗದಿಪಡಿಸಿದರು.
ಎಸಿ ನ್ಯಾಯಾಲಯಗಳಲ್ಲಿ ಯಾವ ಪ್ರಕರಣಗಳನ್ನೂ ಆರು ತಿಂಗಳ ಅವಧಿಗಿಂತ ಹೆಚ್ಚಿನ ಕಾಲ ಇಟ್ಟುಕೊಳ್ಳುವಂತಿಲ್ಲ ಎಂಬ ಕಾನೂನಿದೆ. ಆದರೆ, ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ವೇಳೆ ಅವಧಿ ಮೀರಿದ 60 ಸಾವಿರಕ್ಕೂ ಅಧಿಕ ಪ್ರಕರಣಗಳಿದ್ದವು. ಈ ಎಲ್ಲ ಪ್ರಕರಣಗಳನ್ನೂ ಮುಂದಿನ ಒಂದು ವರ್ಷದಲ್ಲಿ ಇತ್ಯರ್ಥಗೊಳಿಸಲು ಸೂಚಿಸಲಾಗಿತ್ತು.
ಆದರೆ, ಒಂದೂವರೆ ವರ್ಷ ಕಳೆದರೂ ನಮ್ಮ ಈ ಉದ್ದೇಶ ಈಡೇರಿಲ್ಲ. ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ಉಪ-ವಿಭಾಗಾಧಿಕಾರಿಗಳನ್ನು ನೇಮಕ ಮಾಡಿದರೂ ಸಹ ಶೇ.55ರಷ್ಟು ಪ್ರಕರಣ ಮಾತ್ರ ವಿಲೇ ಮಾಡಲಾಗಿದೆ. ಎಸಿ ನ್ಯಾಯಾಲಯಗಳಲ್ಲಿ ಇನ್ನೂ 29,000ಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. ಇದರಿಂದ ಜನ ಸಾಮಾನ್ಯರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಮುಂದಿನ ಮುಂದಿನ ಆರು ತಿಂಗಳೊಳಗಾಗಿ ಈ ಎಲ್ಲ ಪ್ರಕರಣಗಳನ್ನು ಅಧಿಕಾರಿಗಳು ವಿಲೇ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಭಿಯಾನ ಮಾದರಿಯಲ್ಲಿ ಕೆಲಸಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.
ಒಂದು ವರ್ಷದಲ್ಲಿ ಆಗಬೇಕಾದ ಕೆಲಸ ಎರಡು ವರ್ಷ ಆದರೂ ಆಗಿಲ್ಲ. ಇದು ಸರ್ಕಾರ, ನಿಮಗೆ ಶೋಭೆ ತರುವುದಿಲ್ಲ. ಹೀಗಾಗಿ ಈ ವಾರದಿಂದಲೇ ರೆಗ್ಯುಲರ್ ಎಸಿಗಳು ತಿಂಗಳೊಂದಕ್ಕೆ 200 ರಿಂದ 250 ಪ್ರಕರಣಗಳನ್ನು ವಿಲೇ ಮಾಡಿದರೆ, ವಿಶೇಷ ಉಪ-ವಿಭಾಗಾಧಿಕಾರಿಗಳು ಕನಿಷ್ಟ 70 ರಿಂದ 100 ಪ್ರಕರಣ ವಿಲೇಗೊಳಿಸಬೇಕು. ಆರು ತಿಂಗಳ ನಂತರವೂ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು. ಅಲ್ಲದೆ, ಈ ಸಂಬಂಧ ಪ್ರತಿ ತಿಂಗಳೂ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನ್ಯಾಯಾಲಯಗಳ ತಕರಾರು ಪ್ರಕರಣಗಳ ವಿಲೇವಾರಿಯ ಜೊತೆಗೆ ಪೋಡಿ ದುರಸ್ತಿ, ನಮೂನೆ 3-9 ಮಿಸ್ ಮ್ಯಾಚ್ ಹಾಗೂ ಫೌತಿ ಖಾತೆ ಆಂದೋಲನ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲೇ ನಡೆಯಬೇಕು. ಈ ಎಲ್ಲ ಕೆಲಸಗಳನ್ನೂ ಅಭಿಯಾನ ಮಾದರಿಯಲ್ಲಿ ನಡೆಸಬೇಕು ಎಂದು ಹೇಳಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ ಕುಮಾರ್, ಸರ್ವೇ ಇಲಾಖೆ ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.