ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಉತ್ಪ್ರೇಕ್ಷೆ ಬೇಡ; ಆರ್ಥಿಕತೆ ಮತ್ತೆ ಸ್ಥಗಿತಗೊಳಿಸಬೇಡಿ; ತಜ್ಞರು ಹೇಳಿದ್ಯಾರಿಗೆ?

brits
Published on

ದೇಶದಲ್ಲಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಕರೊನಾ ಸಂಕಷ್ಟಮಯ ವಾತಾವರಣ ಉಂಟು ಮಾಡಿದೆ. ಕೆಲ ದೇಶಗಳಲ್ಲಿ ಕರೊನಾ ನಿಯಂತ್ರಣಕ್ಕೆ ಬಂದಿದ್ದರೂ, ಭಾರತ ಸೇರಿ ಹಲವು ದೊಡ್ಡ ರಾಷ್ಟ್ರಗಳಲ್ಲಿ ಕೋವಿಡ್​ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಅಮೆರಿಕದಲ್ಲಿ ಅತಿ ಹೆಚ್ಚು ಕರೊನಾ ಸೋಂಕಿತರಿದ್ದಾರೆ. ನಂತರದ ಸ್ಥಾನದಲ್ಲಿ ಬ್ರೆಜಿಲ್​ ಹಾಗೂ ಭಾರತ ಮೂರನೇ ಸ್ಥಾನದಲ್ಲಿದೆ. ರಷ್ಯಾ, ದಕ್ಷಿಣ ಆಫ್ರಿಕಾದಲ್ಲೂ ಸೋಂಕಿತರು ಹೆಚ್ಚುತ್ತಲೇ ಇದ್ದಾರೆ.

ಈ ನಡುವೆ, ಬ್ರಿಟನ್​ನಲ್ಲಿ ಸೋಂಕಿತರ ಸಂಖ್ಯೆ 3,02,295ಕ್ಕೆ ಏರಿದೆ. ಇಲ್ಲಿ ಚೇತರಿಕೆ ಪ್ರಮಾಣ ಕಡಿಮೆ ಇದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2,54,894 ಆಗಿದೆ. ಆರಂಭದ ದಿನಗಳಿಗೆ ಹೋಲಿಸಿದರೆ, ಇಲ್ಲಿ ಹೊಸ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.

ಕಳೆದೊಂದು ವಾರದಿಂದ ಬ್ರಿಟನ್​ನಲ್ಲಿ ಕೋವಿಡ್​ ಸಂಖ್ಯೆ ಹೆಚ್ಚಾಗುತ್ತಿದೆ. 500ಕ್ಕಿಂತಲೂ ಕಡಿಮೆಯಾಗಿದ್ದ ಪ್ರಮಾಣ ಮತ್ತೆ 700-800ಕ್ಕಿಂತ ಹೆಚ್ಚಾಗುತ್ತಿದೆ. ಎರಡು ವಾರಕ್ಕೆ ಹೋಲಿಸಿದಲ್ಲಿ ಶೇ.28ರಷ್ಟು ಹೆಚ್ಚಾಗಿದೆ. ಇನ್ನು ಎರಡನೇ ಅಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಇದು ಪ್ರಧಾನಿ ಬೋರಿಸ್​ ಜಾನ್ಸನ್​ ಅವರನ್ನು ಭಾರಿ ಕಳವಳಕ್ಕೆ ದೂಡಿದೆ.

ಆದರೆ, ಹೆಚ್ಚುತ್ತಿರುವ ಕರೊನಾ ಸೋಂಕಿತರ ಸಂಖ್ಯೆ ಆತಂಕ ಪಡಬೇಕಿಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ. ಸಂಖ್ಯೆ ಹೆಚ್ಚಾಯಿತೆಮದು ಉತ್ಪ್ರೇಕ್ಷೆ ಮಾಡಬೇಡಿ ಎಂದು ಸಚಿವರಿಗೂ ಕೋರಿದ್ದಾರೆ. ಲಾಕ್​ಡೌನ್​ ಸಡಿಲಿಕೆ ಬಳಿಕ ಇಂಥದ್ದೊಂದು ಏರಿಕೆ ನಿರೀಕ್ಷಿತ ಎಂದು ಅವರು ಹೇಳಿದ್ದಾರೆ.

ನಿಜಕ್ಕೂ ಆತಂಕಪಡಬೇಕಿದ್ದರೆ ಅದಕ್ಕೆ ಇನ್ನೆರಡು ವಾರವಾದರೂ ತಡೆಯಿರಿ ಎಂಬುದು ಈಸ್ಟ್​ ಅಂಗ್ಲಿಯಾ ಪ್ರಾಧ್ಯಾಪಕ ಪೌಲ್​ ಹಂಟರ್​ ಸಲಹೆ. ಕರೊನಾ ವೈರಸ್​ ದೂರಾಗಿಲ್ಲ ಎಂಬುದು ನಮಗೂ ಗೊತ್ತು. ಅದಕ್ಕಾಗಿ ಅದರೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳಬೇಕಿದೆ ಎನ್ನುವುದು ಇನ್ನೊಬ್ಬ ತಜ್ಞರ ಅಭಿಮತ.

ಕೇಸ್​ಗಳು ಹೆಚ್ಚಳವಾದ ಬೆನ್ನಲ್ಲೇ ಉದ್ಯಮಿಗಳು ಕೂಡ ಚಿಂತಿತರಾಗಿದ್ದಾರೆ. ಮತ್ತೆ ನಿರ್ಬಂಧಗಳನ್ನು ಹೇರಿದರೆ, ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಲಿದೆ ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net