ತಜ್ಞ ಅಭಿಪ್ರಾಯ: ಗ್ಯಾರಂಟಿ ಒಳಗೊಳ್ಳುವಿಕೆ, ಬದಲಾವಣೆ ಸಂಚಲನ

Sunandamma F
Published on

| ಡಾ. ಆರ್. ಸುನಂದಮ್ಮ, ಮಹಿಳಾಪರ ಚಿಂತಕಿ 
ಸಿದ್ದರಾಮಯ್ಯ ಅವರ ಹಿಂದಿನ ಹದಿಮೂರು ಬಜೆಟ್​ಗಳನ್ನು ಅಧ್ಯಯನ ಮಾಡಿದಾಗ ಅವುಗಳಲ್ಲಿ ಜನಪರ ಮತ್ತು ಅಭಿವೃದ್ಧಿಪರ ನಿಲುವುಗಳನ್ನು ಕಾಣಬಹುದಿತ್ತು. ಇದೀಗ ಹದಿನಾಲ್ಕನೇ ಬಜೆಟ್​ನಲ್ಲಿ ಗ್ಯಾರಂಟಿಗಳ ಜಾರಿಗೆ ಒತ್ತು ನೀಡಿದ್ದು, ಅದು ಎಲ್ಲರ ಒಳಗೊಳ್ಳುವಿಕೆಗೆ ಕಾರಣವಾಗಲಿದೆ.

ಭಾರತದಲ್ಲಿ ಎಷ್ಟೇ ಏರಿಳಿತಗಳಾದರೂ ಮಾರುಕಟ್ಟೆ ಆರ್ಥಿಕತೆ ಬೀಳದಿರುವುದಕ್ಕೆ ಪ್ರಮುಖ ಕಾರಣವೆಂದರೆ ನಮ್ಮಲ್ಲಿರುವ ಶೇ.45ಕ್ಕೂ ಹೆಚ್ಚಿನ ಪ್ರಮಾಣದ ಜನ ಬಡವರಾಗಿರುವುದು. ಅವರ ಕೈಯಲ್ಲಿ ಹಣ ಹರಿದಾಡಿದರೆ ಅದು ಮತ್ತೆ ಮಾರುಕಟ್ಟೆಗೆ ಬರಲಿದೆ. ಐದು ಗ್ಯಾರಂಟಿಗಳು ಇಂತಹ ಬದಲಾವಣೆ ತರಲಿವೆ. ಬಡವರಲ್ಲಿ ಒಂದು ರೀತಿಯ ಸಂಚಲನ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಿಂದೆ ಅನ್ನಭಾಗ್ಯ ಜಾರಿಗೆ ತಂದಾಗ ವಿಜಯಪುರದಲ್ಲಿ ಕೆಲವು ಸಮುದಾಯ ಭಿಕ್ಷೆ ಬೇಡುವುದನ್ನೇ ಬಿಟ್ಟು ಸ್ವಂತ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದು ಅಧ್ಯಯನದಿಂದ ಕಂಡು ಬಂದಿದೆ.

ಸದ್ಯ ಸಮಾಜದಲ್ಲಿ ಬಡವರ ಆದಾಯದ ಮೂಲಗಳು ಕಡಿಮೆಯಾಗುತ್ತಿವೆ. ಗುತ್ತಿಗೆ ಕಾರ್ವಿುಕ ಪದ್ಧತಿ ಹೆಚ್ಚಾಗುತ್ತಿದೆ. ಇಂತಹವರಿಗೆ ಬಸ್ ಪ್ರಯಾಣ ಉಚಿತ, ತಿಂಗಳಿಗೆ 2 ಸಾವಿರ ರೂ., ವಿದ್ಯುತ್, ಅನ್ನಭಾಗ್ಯ ನೀಡಿದರೆ ಅದರಲ್ಲಿ ಉಳಿತಾಯವಾಗುವ ಹಣ ಶಿಕ್ಷಣ, ವಸತಿ, ಮೂಲಭೂತ ಅಗತ್ಯಗಳ ಕಡೆ ಬಳಕೆಯಾಗುತ್ತದೆ. ಮಾರುಕಟ್ಟೆ ಆರ್ಥಿಕತೆ ಬೆಳೆಯುತ್ತದೆ. ಈ ಬಜೆಟ್​ನಲ್ಲಿ ಚಿಕ್ಕಚಿಕ್ಕ ಪ್ರಮಾಣದ ಬದಲಾವಣೆಗಳನ್ನು ನಾವು ಸಾಕಷ್ಟು ಕಾಣುತ್ತೇವೆ. ಸಿದ್ದರಾಮಯ್ಯ ಮುಂದಿನ ಐದು ಬಜೆಟ್​ಗಳಲ್ಲಿಯೂ ಇದೇ ಮಾದರಿ ಅನುಸರಿಸಿದರೆ ಬಡವರಲ್ಲಿ ಒಂದು ರೀತಿಯ ಸಂಚಲನ ಸೃಷ್ಟಿಯಾಗುತ್ತದೆ. ಇದರಿಂದಾಗಿ ಒಂದು ರೀತಿಯ ಧನಾತ್ಮಕ ಬೆಳವಣಿಗೆಯನ್ನು ನಾವು ಕಾಣಬಹುದಾಗಿದೆ. ಈ ಐದು ಗ್ಯಾರಂಟಿಗಳು ಪ್ರಮುಖವಾಗಿ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಗ್ಯಾರಂಟಿಗಳ ಮೂಲಕ ಅಭಿವೃದ್ಧಿಗೂ ಒತ್ತು ನೀಡುವುದನ್ನು ಬಜೆಟ್​ನಲ್ಲಿ ಗುರುತಿಸಬಹುದಾಗಿದೆ. ಉದಾಹರಣೆಗೆ ಶಕ್ತಿ ಯೋಜನೆಯಲ್ಲಿ ಪುಣ್ಯಕ್ಷೇತ್ರಗಳಿಗೆ ಹೋಗುವ ಮಹಿಳೆಯರಿಗಾಗಿ ಅಂತಹ ಸ್ಥಳಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಇದು ಸ್ವಾಗತಾರ್ಹವಾದ ಸಂಗತಿಯಾಗಿದೆ. ಗೃಹಲಕ್ಷ್ಮಿ ಯೋಜನೆಯನ್ನು ಆಶಾ ಮತ್ತು ಬಿಸಿಯೂಟ ಕಾರ್ವಿುಕರಿಗೂ ವಿಸ್ತರಿಸಲು ಕೈಗೊಂಡಿರುವ ನಿರ್ಧಾರ ಅತ್ಯಂತ ಪ್ರಮುಖವಾದ ತೀರ್ವನವಾಗಿದೆ.

ಬೆಂಗಳೂರಿನ ಅಭಿವೃದ್ಧಿಯಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲಾಗಿದೆ. ಇದೆಲ್ಲದಕ್ಕಿಂತ ನೈತಿಕ ಪೊಲೀಸ್​ಗಿರಿ ತಡೆಗೆ ಪ್ರತ್ಯೇಕ ಕಾನೂನು ತರಲು ಸರ್ಕಾರ ಮುಂದಾಗಿರುವುದು ಮಹಿಳೆಯರಿಗೆ ಅನುಕೂಲವಾಗಿದ್ದರೆ, ಆ ಮೂಲಕ ಅದು ಸಮಾಜದಲ್ಲಿ ಶಾಂತಿ ನೆಲೆಸುವ ಗ್ಯಾರಂಟಿಯಾಗಿದೆ. ಮಹಿಳೆಯರಿಗಾಗಿ 100 ಪೆಟ್ರೋಲ್ ಬಂಕ್​ಗಳನ್ನು ಮಾಡುವ ನಿರ್ಧಾರ ಪ್ರಮುಖವಾಗಿ ಉದ್ಯೋಗಗಳ ಅವಕಾಶಗಳನ್ನು ಸೃಷ್ಟಿಸಿ ಮಹಿಳಾ ಸಬಲೀಕರಣದ ಗ್ಯಾರಂಟಿಯೂ ಆಗಿದೆ. ಹಿಂದೆ ನಿಂತಿದ್ದ ಅನೇಕ ಫೆಲೋಶಿಪ್​ಗಳನ್ನು ಮತ್ತೆ ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಬಜೆಟ್ಟಿನ ಶೇ.10 ಅನ್ನು ಶಿಕ್ಷಣಕ್ಕೆ ಮೀಸಲಿಟ್ಟಿರುವ ಕ್ರಮದಿಂದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಎಲ್ಲರ ಒಳಗೊಳ್ಳುವಿಕೆಯ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಹೀಗೆ ಧನಾತ್ಮಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಎಲ್ಲರನ್ನೂ ಒಳಗೊಳ್ಳುವ ಗ್ಯಾರಂಟಿಯ ಬಜೆಟ್ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net