

| ಪ್ರೊ. ಕೃಷ್ಣರಾಜ್, ಹಿರಿಯ ಅರ್ಥಶಾಸ್ತ್ರಜ್ಞ
ಸಿದ್ದರಾಮಯ್ಯ ಅವರ 14 ನೇ ಮುಂಗಡಪತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಮತೋಲನ, ಸಮಗ್ರ, ಎಲ್ಲ ವಲಯಗಳನ್ನು ಒಳಗೊಳ್ಳುವ ಅಭಿವೃದ್ಧಿಗೆ ಪೂರಕವಾದ ಸಮತೋಲಿತ ಬಜೆಟ್ ಎಂಬುದು ಕಂಡು ಬರುತ್ತದೆ. ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ರೂ.ಗಳು ವೆಚ್ಚವಾಗುತ್ತಿದೆ. 3.27 ಲಕ್ಷ ಕೋಟಿ ರೂ.ಗಳ ಮೊತ್ತದ ಆಯವ್ಯಯ ಮಂಡಿಸಲಾಗಿದೆ. ಸುಮಾರು 9 ಸಾವಿರ ಕೋಟಿ ರೂ.ಗಳನ್ನು ಮಾತ್ರ ಹೆಚ್ಚುವರಿ ಸಾಲ ಮಾಡಿ ಇಷ್ಟು ದೊಡ್ಡ ಮೊತ್ತವನ್ನು ವೆಚ್ಚ ಮಾಡಲಾಗುತ್ತಿದೆ.
ಇದರ ಜತೆಗೆ ಬಂಡವಾಳ ವೆಚ್ಚವನ್ನು ಕಡಿಮೆ ಮಾಡದೇ 52 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಈ ಎರಡನ್ನು ನೋಡಿದಾಗ ಸಮಸಮಾಜ ನಿರ್ಮಾಣ ಹಾಗೂ ಸರ್ವಾಂಗೀಣ ಅಭಿವೃದ್ಧಿಯ ದೃಷ್ಠಿಕೋನ ಕಂಡು ಬರುತ್ತದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ನಲ್ಲಿ ವಿಶೇಷ ಒತ್ತು ಸಿಕ್ಕಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕತೆ ನೀಡುವುದಕ್ಕೆ ಮುಂದಾಗಿರುವುದು, ನೀರಾವರಿಗೆ ನೀಡುತ್ತಿರುವ ಆದ್ಯತೆ ಒಳ್ಳೆಯ ಕ್ರಮವಾಗಿದೆ. ಕೃಷಿ ಮಾರುಕಟ್ಟೆ ಕಾಯ್ದೆಯ ತಿದ್ದುಪಡಿ ರದ್ದು ಮಾಡುವುದಾಗಿ ಹೇಳಿರುವುದು ಕೃಷಿಕರಿಗೆ ಅನುಕೂಲ. ನೂತನ ಶಿಕ್ಷಣ ನೀತಿಯನ್ನು ರದ್ದು ಮಾಡಿ ಹೊಸ ನೀತಿ ತರುತ್ತಿದ್ದಾರೆ. ಅದು ಹೇಗೆ ಭಿನ್ನವಾಗಿರುತ್ತದೆೆ ಎಂಬುದನ್ನು ನೋಡಬೇಕಾಗಿದೆ. ಆದರೆ ಹೊಸ ನೀತಿ ವೈಜ್ಞಾನಿಕವಾಗಿರಬೇಕು ಅಷ್ಟೇ. ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಟೆಕ್ಪಾರ್ಕ್, ಸೆಮಿಕಂಡಕ್ಟರ್ ಉದ್ಯಮ, ಮೆಟ್ರೋ ವಿಸ್ತರಣೆ, ಸಂಚಾರದ ದಟ್ಟಣೆ ಕಡಿಮೆ ಮಾಡಲು ಮುಂದಾಗಿರುವುದು ಬೆಂಗಳೂರನ್ನು ವಿಶ್ವದರ್ಜೆ ನಗರವನ್ನಾಗಿ ಬ್ರ್ಯಾಂಡ್ ಮಾಡಲು ಅನುಕೂಲವಾಗಲಿದೆ. ಎರಡನೇ ಹಂತದ ನಗರಗಳ ಕಡೆಗೂ ಅಷ್ಟೇ ಪ್ರಮಾಣದ ಗಮನ ಹರಿಸಬೇಕಾಗಿತ್ತು. ತೆರಿಗೆ ಸಂಗ್ರಹದ ಗುರಿ ಹೆಚ್ಚಿಸಿಕೊಂಡಿದ್ದಾರೆ. ಆ ಗುರಿ ನಿಜಕ್ಕೂ ಸಾಧನೆಯಾಗುವುದೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಕೆಲವು ಸಬ್ಸಿಡಿಗಳನ್ನು ಕೈಬಿಡಲಾಗಿದೆ, ಕೆಲವು ಯೋಜನೆಗಳ ಅನುದಾನ ಕಡಿಮೆ ಮಾಡಿದ್ದಾರೆ. ಸದ್ಯದ ಮಟ್ಟಿಗೆ ಅವರಿಗೆ ಅದು ಅನಿವಾರ್ಯವೂ ಆಗಿತ್ತು. ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದ ವರ್ಗಗಳನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗಿದೆ. ಎಸ್ಸಿಎಸ್ಪಿ ಹಾಗೂ ಟಿಎಸ್ಪಿಯಲ್ಲಿ 7(ಡಿ) ತೆಗೆದು ಹಾಕುವ ಮೂಲಕ ಹಣ ಅದೇ ವರ್ಗಗಳಿಗೆ ವೆಚ್ಚವಾಗುವ ರೀತಿಯಲ್ಲಿ ಮಾಡಲಾಗುತ್ತಿದೆ. ಇಂದಿನ ಬಹುದೊಡ್ಡ ಸಮಸ್ಯೆಯಾಗಿರುವ ಜಾಗತಿಕ ತಾಪಮಾನ ತಗ್ಗಿಸುವ ನಿಟ್ಟಿನಲ್ಲಿ 2 ಕ್ರಮಗಳಿಗೆ ಮುಂದಾಗಿದ್ದಾರೆ.
ಇದರ ಜತೆಗೆ ವಿದ್ಯುತ್ ಚಾಲಿತ ಬಸ್ಗಳ ಖರೀದಿಯನ್ನು ಹೆಚ್ಚಿಸಬೇಕಾಗಿತ್ತು. ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯ ಜತೆಗೆ ಸಿರಿಧಾನ್ಯಗಳನ್ನು ನೀಡುವ ಕಡೆ ಗಮನ ಕೇಂದ್ರೀಕರಿಸಬೇಕಾಗಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೊಂದು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿತ್ತು. ಅದಕ್ಕೆ ಪೂರಕವಾಗಿ ನೇಮಕಾತಿ, ಸಂಶೋಧನೆ ಕಡೆ ಗಮನ ಹರಿಸಬೇಕಾಗಿತ್ತು. ಉದ್ಯೋಗ ಸೃಷ್ಟಿಗೆ ಆದ್ಯತೆ ಕಡಿಮೆ ಇದೆ. ಸಾಲ 8 ಸಾವಿರ ಕೋಟಿ ರೂ. ಹೆಚ್ಚುವರಿಯಾಗಿ ಮಾಡುತ್ತಿದ್ದರೂ ಸಹ ವಿತ್ತೀಯ ಕೊರತೆ ಶೇ. 3.28ರ ಮಿತಿಯಲ್ಲಿಯೇ ಇರುವುದು ಆರ್ಥಿಕ ಶಿಸ್ತನ್ನು ಕಾಪಾಡಲಿದೆ. ಉತ್ತಮ ಆಡಳಿತದ ಮೂಲಕ ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಪ್ರತಿ ಇಲಾಖೆಗೂ ಗುರಿ ನಿಗದಿ ಮಾಡಬೇಕು.